ಶಂಕರಪುರ ಮತ್ತು ಲಕ್ಷ್ಮೀಶನಗರ ನಾಗರೀಕ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರಿಂದ ಮತದಾರರ ಜಾಗೃತಿ ಅಭಿಯಾನ…

213
firstsuddi

ಚಿಕ್ಕಮಗಳೂರು: ಶಂಕರಪುರ ಮತ್ತು ಲಕ್ಷ್ಮೀಶನಗರ ನಾಗರೀಕ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದಲ್ಲಿ ಸೋಮವಾರ ಮತದಾರರ ಜಾಗೃತಿ ಅಭಿಯಾನ ನಡೆಸಿದರು.
ದೀಪಾ ನರ್ಸಿಂಗ್ ಹೋಂ ಮುಂಭಾಗದಿಂದ ಕಾಲ್ನಡಿಗೆಯಲ್ಲಿ ಹೊರಟ ಕಾರ್ಯಕರ್ತರು ಶಂಕರಪುರ ಮತ್ತು ಲಕ್ಷ್ಮೀಶನಗರದ ವಿವಿಧ ಬೀದಿಗಳಲ್ಲಿ ಸಂಚರಿಸಿ ಮನೆ ಮನೆಗೆ ತೆರಳಿ ಯಾವುದೇ ಆಮಿಷಕ್ಕೆ ಬಲಿಯಾಗದೆ ಮತದಾನ ಮಾಡುವಂತೆ ಮನವಿ ಮಾಡಿದರು.
ಅಭ್ಯರ್ಥಿಗಳು ಮತ್ತು ವಿವಿಧ ಪಕ್ಷಗಳು ಒಡ್ಡುವ ಆಸೆ, ಆಮಿಷಗಳಿಗೆ ಬಲಿಯಾಗಬಾರದು, ಯಾವುದೇ ಕಾರಣಕ್ಕೂ ಮತವನ್ನು ಮಾರಿಕೊಳ್ಳಬಾರದು ಎಂದು ನಾಗರೀಕರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಕಾರ್ಯದರ್ಶಿ ಸಿ.ಚೆನ್ನಕೇಶವ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಕೆಲ ಪಕ್ಷಗಳ ಅಭ್ಯರ್ಥಿಗಳು ಶಂಕರಪುರ ಮತ್ತು ಲಕ್ಷ್ಮೀಶನಗರ ಬಡಾವಣೆಯಲ್ಲಿ ಈಗಾಗಲೇ ನಾಗರೀಕರಿಗೆ ಬಾಡೂಟ, ಹಣ ಮತ್ತು ಹೆಂಡದ ಆಮಿಷವನ್ನು ಒಡ್ಡಿ ಅವರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಶಂಕರಪುರ ಮತ್ತು ಲಕ್ಷ್ಮೀಶನಗರ ನಾಗರೀಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಜೆ.ಸತ್ಯನಾರಾಯಣ, ಕಾರ್ಯಾಧ್ಯಕ್ಷ ಎಂ.ರುದ್ರಪ್ಪ, ನಗರಸಭೆ ಮಾಜಿ ಸದಸ್ಯ ಮುನಿಸ್ವಾಮಿ ಅಯ್ಯರ್, ನಿವೃತ್ತ ಪ್ರಾಂಶುಪಾಲ ಧೃವಕುಮಾರ್, ರಾಜೇಶ್, ಅಭಿಯಾನದಲ್ಲಿ ಪಾಲ್ಗೊಂಡಿದ್ದರು.