ಚಿತ್ರದುರ್ಗ: ಅಂತರ್ಜಾತಿ ವಿವಾಹವಾಗಿದ್ದ ವಿಕಲಚೇತನ ದಂಪತಿಗೆ ಗ್ರಾಮದಿಂದ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆಯೊಂದು ಜಿಲ್ಲೆಯ ಚಳ್ಳಕೆರೆ ತಾಲೂಕಿನ ಎನ್ ದೇವರಹಳ್ಳಿಯಲ್ಲಿ ನಡೆದಿದೆ.
ಎನ್ ದೇವರಹಳ್ಳಿ ಗ್ರಾಮದ ಸಾವಿತ್ರಮ್ಮ ಹಾಗೂ ಆಂಧ್ರ ಮೂಲದ ಮಣಿಕಂಠ ಕಳೆದ 3 ವರ್ಷದ ಹಿಂದೆ ಬೆಂಗಳೂರಿನಲ್ಲಿ ಪ್ರೀತಿಸಿ ಮದುವೆ ಆಗಿದ್ದರು. ಈ ಜೋಡಿ ಹುಟ್ಟುತ್ತಲೇ ಶ್ರವಣ ಮತ್ತು ವಾಕ್ ದೋಷ ಹೊಂದಿದ್ದಾರೆ. ಇದೀಗ ತವರು ಮನೆಗೆ ಬಂದಿರುವ ಸಾವಿತ್ರಮ್ಮಳನ್ನು ಆ ಗ್ರಾಮದ ಜೋಗಿ ಜನಾಂಗದ ಮಹಾನ್ ಪುರುಷರು ಅಂತರ್ ಜಾತಿ ವಿವಾಹ ಆಗಿದ್ದೀರಿ ಅಂತ ಅವರನ್ನು ನಿಂದಿಸಿ, 30,000 ಸಾವಿರ ರೂ. ದಂಡ ವಿಧಿಸಿದ್ದಾರೆ. ಅಲ್ಲದೇ ದಂಪತಿಯನ್ನು ಗ್ರಾಮದಿಂದ ಆಚೆ ಹೋಗುವಂತೆ ಬಹಿಷ್ಕರಿಸಿದ್ದರು. ಬಳಿಕ ದಂಪತಿ ವಿಧಿ ಇಲ್ಲದೇ ಬೆಂಗಳೂರಿಗೆ ತೆರಳಿದ್ದರು.
ಬಳಿಕ ಚಳ್ಳಕೆರೆ ತಾಲೂಕಿನಲ್ಲಿ ನಡೆದ ಪ್ರಸಿದ್ಧ ಗೌರಸಂದ್ರ ಮಾರಮ್ಮ ಜಾತ್ರೆಗೆಂದು ಆಗಮಿಸಿದ್ದಾಗಲೂ ಗ್ರಾಮದ ಅನೇಕ ಮುಖಂಡರು ಅವರಿಗೆ ಕಿರುಕುಳ ಕೊಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಪುಟ್ಟ ಮಗುವಿನೊಂದಿಗೆ ದಂಪತಿ ಆಗಮಿಸಿದ್ದನ್ನೂ ಲೆಕ್ಕಿಸದ ಗ್ರಾಮಸ್ಥರು ಮನೆ ಬಿಟ್ಟು ಹೋಗುವಂತೆ ಒತ್ತಡ ಹಾಕಿದ್ದಲ್ಲದೇ ಮತ್ತೆಯೂ ದಂಡ ವಿಧಿಸಲು, ಬಹಿಷ್ಕಾರ ಹಾಕಲು ಮುಂದಾಗಿದ್ದಾರೆ. ಇದರಿಂದಾಗಿ ಬೇಸರಗೊಂಡ ಜೋಡಿ ತಮ್ಮ ಪುಟ್ಟ ಮಗುವಿನೊಂದಿಗೆ ಚಳ್ಳಕೆರೆ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಇದೀಗ ಸಂತ್ರಸ್ತ ಜೋಡಿಯ ಪರ ನಿಂತ ಸಾಮಾಜಿಕ ಹೋರಾಟಗಾರರು ಪ್ರತಿಭಟನೆಗೆ ಮುಂದಾಗಿದ್ದು, ಬಹಿಷ್ಕಾರ ಹಾಕಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.










