ನವದೆಹಲಿ : ಭಾರತದಲ್ಲಿ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಗೆ ವಿಧಿಸಲಾಗಿದ್ದ ನಿರ್ಬಂಧವನ್ನು 2022, ಫೆಬ್ರವರಿ 28ರ ವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಇಂದು ಅಧಿಸೂಚನೆ ಹೊರಡಿಸಿದೆ.
ಡಿಜಿಸಿಎ ಕಳೆದ ಡಿಸೆಂಬರ್ 15 ರಿಂದ ನಿಗದಿತ ಅಂತರಾಷ್ಟ್ರೀಯ ವಿಮಾನ ಸೇವೆ ಆರಂಭಿಸಲು ನಿರ್ಧರಿಸಿತ್ತು. ಆದರೆ ಕೊರೊನಾ ಹೊಸ ರೂಪಾಂತರಿ ಓಮಿಕ್ರಾನ್ ಪ್ರಕರಣಗಳು ವರದಿಯಾದ ನಂತರ ತನ್ನ ನಿರ್ಧಾರ ಬದಲಿಸಿದ್ದು, ಫೆಬ್ರವರಿ 28ರ ವರೆಗೆ ಅಂತರಾಷ್ಟ್ರೀಯ ವಿಮಾನಗಳ ಮೇಲಿನ ನಿರ್ಬಂಧವನ್ನು ಮುಂದುವರೆಸಿದೆ.
ಅದಾಗ್ಯೂ ಗೃಹ ಸಚಿವಾಲಯದಿಂದ ಅನುಮತಿ ಪಡೆದವರು ಮಾತ್ರವೇ ನಿಗದಿತ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ ಮತ್ತು ಈ ನಿರ್ಬಂಧವೂ ಕಾರ್ಗೋ ವಿಮಾನ ಸೇವೆಗೆ ಅನ್ವಯವಾಗುವುದಿಲ್ಲ ಎಂದು ಡಿಜಿಸಿಎ ಸ್ಪಷ್ಟಪಡಿಸಿದೆ.
ಕೋವಿಡ್-19 ಸಾಂಕ್ರಾಮಿಕದ ದೃಷ್ಟಿಯಿಂದ ಭಾರತದಲ್ಲಿ ನಿಗದಿತ ಅಂತಾರಾಷ್ಟ್ರೀಯ ಪ್ರಯಾಣಿಕರ ಸೇವೆಗಳನ್ನು 2020ರ ಮಾರ್ಚ್ 23ರಿಂದ ಸ್ಥಗಿತಗೊಳಿಸಲಾಗಿದೆ. ಆದರೂ ವಿಶೇಷ ಅಂತಾರಾಷ್ಟ್ರೀಯ ವಿಮಾನಗಳು ಮೇ 2020ರಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಮತ್ತು ದ್ವಿಪಕ್ಷೀಯ “ಏರ್ ಬಬಲ್” ವ್ಯವಸ್ಥೆಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.










