ಚಾಮರಾಜನಗರ : ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ನಾನು ಅವಮಾನಿಸಿದ್ದರೆ ನನ್ನನ್ನು ನೇಣಿಗೆ ಹಾಕಿ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕರೆ ನೀಡಿದ್ದಾರೆ. ಶಿಕ್ಷಣ ಇಲಾಖೆ ಹೊರಡಿಸಿದ್ದ ಸಂವಿಧಾನ ದಿನಾಚರಣೆಯ ಸುತ್ತೋಲೆಯಲ್ಲಿ ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ ಎಂದು ಬರೆಯಲಾಗಿತ್ತು. ಈ ಕುರಿತು ಭಾರಿ ವಿವಾದಗಳು ಸೃಷ್ಟಿಯಾಗಿ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂಬ ಒತ್ತಾಯಗಳು ಕೇಳಿ ಬಂದಿದ್ದು, ಈ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಯಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಅಂಬೇಡ್ಕರ್ ಬಗ್ಗೆ ನಾನು ಅವಮಾನಿಸಿದ್ದರೆ ನನ್ನನ್ನು ಚಾಮರಾಜನಗರದ ಸರ್ಕಲ್‍ನಲ್ಲಿ ನೇಣಿಗೆ ಹಾಕಿ. ಖಾಸಗಿ ಸಂಸ್ಥೆ ಹಾಗೂ ಶಿಕ್ಷಣ ಇಲಾಖೆಯ ನಿರ್ದೇಶಕರಿಂದ ಈ ತಪ್ಪು ನಡೆದಿದೆ. ಹೀಗಾಗಿ ನಿರ್ದೇಶಕರು ಸೇರಿ ಮೂವರನ್ನು ಅಮಾನತು ಮಾಡಲಾಗಿದೆ. ಅಲ್ಲದೇ ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸುವಂತೆ ಸೂಚನೆ ನೀಡಿದ್ದೇವೆ. ನಿರ್ದೇಶಕರು ನಮ್ಮೊಂದಿಗೆ ಚರ್ಚೆ ನಡೆಸದೇ ಏಕಾಏಕಿ ಸುತ್ತೋಲೆಯನ್ನು ವೆಬ್‍ಸೈಟ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದು ಕೂಡಲೇ ನಮ್ಮ ಗಮನಕ್ಕೆ ಬರುತ್ತಿದ್ದಂತೆ ಅದನ್ನು ವೆಬ್‍ಸೈಟ್‍ನಿಂದ ಡಿಲಿಟ್ ಮಾಡಿದ್ದೇವೆ ಎಂದರು.










