ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ತಿದ್ದುಪಡಿಗೆ ಸುಪ್ರೀಂ ಒಪ್ಪಿಗೆ…

67
firstsuddi

ನವದೆಹಲಿ : ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಹಲವು ನಿಬಂಧನೆಗಳ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಪಿಎಂಎಲ್ಎ ಕಾಯಿದೆಯ ತಿದ್ದುಪಡಿಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದ್ದು, ಇದರಿಂದ ಅರ್ಜಿ ಸಲ್ಲಿಸಿದ್ದ ವಿರೋಧ ಪಕ್ಷಗಳಿಗೆ ಭಾರೀ ಹಿನ್ನಡೆಯಾಗಿದೆ.

ನ್ಯಾ. ಎ.ಎಂ ಖಾನ್ವಿಲ್ಕರ್‌, ನ್ಯಾ. ದಿನೇಶ್‌ ಮಹೇಶ್ವರಿ, ನ್ಯಾ. ಸಿ.ಟಿ. ರವಿಕುಮಾರ್‌ ಅವರಿದ್ಧ ತ್ರಿಸದಸ್ಯ ಪೀಠವು ವಿಚಾರಣೆ ನಡೆಸಿದ್ದು, ಪಿಎಂಎಲ್ಎ ಕಾಯಿದೆಯ ಸೆಕ್ಷನ್ 5 ಸಾಂವಿಧಾನಿಕವಾಗಿ ಮಾನ್ಯವಾಗಿದ್ದು, ಸೆಕ್ಷನ್ 5 ಸಮತೋಲನದಿಂದ ಕೂಡಿದೆ. ಜಾರಿ ನಿರ್ದೇಶನಾಲಯಕ್ಕೆ ಇರುವ ಬಂಧನದ ಅಧಿಕಾರ ಏಕಪಕ್ಷೀಯವಾಗಿಲ್ಲ ಎಂದಿರುವ ಸುಪ್ರೀಂ ಕೋರ್ಟ್ ಇಡಿಗೆ ಇರುವ ಬಂಧನದ ಅಧಿಕಾರವನ್ನು ಎತ್ತಿ ಹಿಡಿದಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ಕೆಲವು ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಬ್ಯಾಚ್ ನಲ್ಲಿ ಸುಪ್ರೀಂ ಕೋರ್ಟ್ ಈ ಹಿಂದೆ ತನ್ನ ಆದೇಶವನ್ನು ಕಾಯ್ದಿರಿಸಿತ್ತು. ಅರ್ಜಿದಾರರಲ್ಲಿ ರಾಜಕಾರಣಿ ಕಾರ್ತಿ ಚಿದಂಬರಂ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸೇರಿದಂತೆ ಇತರರು ಸೇರಿದ್ದಾರೆ.

ಕೇಂದ್ರ ಸರ್ಕಾರವು ಪಿಎಂಎಲ್ ಎಯ ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವವನ್ನು ಸಮರ್ಥಿಸಿತ್ತು. ಅಕ್ರಮ ಹಣ ವರ್ಗಾವಣೆ ಕೇವಲ ವಿಜಯ್ ಮಲ್ಯ ಅಥವಾ ನೀರವ್ ಮೋದಿಯಂತಹ ಭ್ರಷ್ಟ ಉದ್ಯಮಿಗಳಿಂದ ಮಾತ್ರವಲ್ಲದೆ ಭಯೋತ್ಪಾದಕ ಗುಂಪುಗಳಿಂದ ನಡೆಸಲ್ಪಡುವುದರಿಂದ, ಹಣ ವರ್ಗಾವಣೆಯು ಹಣಕಾಸು ವ್ಯವಸ್ಥೆಗಳಿಗೆ ಮಾತ್ರವಲ್ಲದೆ ರಾಷ್ಟ್ರಗಳ ಸಮಗ್ರತೆ ಮತ್ತು ಸಾರ್ವಭೌಮತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಕೇಂದ್ರವು ಪಿಎಂಎಲ್ ಗೆ ತಿದ್ದುಪಡಿಗಳನ್ನು ಸಮರ್ಥಿಸಿಕೊಂಡಿತ್ತು.

ಈ ಕುರಿತು ಒಟ್ಟು 242 ಮೇಲ್ಮನವಿಗಳು ಸಲ್ಲಿಕೆಯಾಗಿತ್ತು. ತನಿಖೆ ಪ್ರಾರಂಭಿಸುವುದು, ಸಾಕ್ಷಿಗಳು ಅಥವಾ ಆರೋಪಿಗಳನ್ನು ವಿಚಾರಣೆಗೆ ಕರೆಸುವುದು, ಹೇಳಿಕೆಗಳನ್ನು ದಾಖಲಿಸುವುದು, ಆಸ್ತಿ ವಶಪಡಿಸಿಕೊಳ್ಳುವ ಪ್ರಕ್ರಿಯೆಯು ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಆದಾಗ್ಯೂ, ಈ ಕಾಯ್ದೆಯನ್ನು ಸರ್ಕಾರ ಸಮರ್ಥಿಸಿಕೊಂಡಿತ್ತು.

ಸೋಮವಾರ ಲೋಕಸಭೆ ಕಲಾಪದಲ್ಲಿ ಕೇಂದ್ರ ಸರ್ಕಾರ ನೀಡಿದ ಮಾಹಿತಿ ಪ್ರಕಾರ, 2022ರ ಮಾರ್ಚ್ 31ರವರೆಗೆ ಇಡಿ (ಜಾರಿ ನಿರ್ದೇಶನಾಲಯ) ಪಿಎಂಎಲ್ಎ ಅಡಿಯಲ್ಲಿ 5,422 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. 992 ಪ್ರಕರಣಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದೆ. 869.31 ಕೋಟಿ ರೂ. ಜಪ್ತಿ ಮಾಡಿಸಿಕೊಳ್ಳಲಾಗಿದ್ದು, 23 ಮಂದಿ ಆರೋಪಿಗಳಿಗೆ ಶಿಕ್ಷೆಯಾಗಿದೆ.