ಕಲಬುರಗಿ: ಅಣ್ಣ-ತಂಗಿ ವರಸೆಯ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಮನನೊಂದು ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಾಗಣಗೇರೆ ಗ್ರಾಮದಲ್ಲಿ ನಡೆದಿದೆ.
ಶಶಿಕಲಾ (20) ಗೊಲ್ಲಾಳಪ್ಪ (24) ನೇಣಿಗೆ ಶರಣಾದ ಪ್ರೇಮಿಗಳು. ಶಶಿಕಲಾ ಮತ್ತು ಗೊಲ್ಲಾಳಪ್ಪ ಇಬ್ಬರು ಕೂಡ ವರಸೆಯಲ್ಲಿ ಅಣ್ಣ ತಂಗಿ ಆಗಿದ್ದರು. ಅದರಿಂದ ಎರಡೂ ಮನೆಯವರು ಅಣ್ಣ-ತಂಗಿ ಪ್ರೀತಿಗೆ ನಿರಾಕರಿಸಿದ್ದಾರೆ.
ಶಶಿಕಲಾಗೆ ಬೇರೆ ಮದುವೆ ಮಾಡಲು ಕುಟುಂಬಸ್ಥರು ಮುಂದಾಗಿದ್ದರು. ಅದರಂತೆ ವಿಜಯಪುರ ಜಿಲ್ಲೆಯ ಸಿಂಧಗಿ ಗ್ರಾಮದ ಯುವಕನ ಜೊತೆ ನಿಶ್ಚಿತಾರ್ಥ ಮಾಡಿಸಿದ್ದರು. ಮುಂದಿನ ತಿಂಗಳು ಮದುವೆ ಕೂಡ ನಿಶ್ಚಯವಾಗಿತ್ತು ಎನ್ನಲಾಗಿದೆ.
ಮನೆಯವರ ವಿರೋಧದ ನಡುವೆ ನಿನ್ನೆ ರಾತ್ರಿ ಪ್ರೇಮಿಗಳು ಮದುವೆ ಮಾಡಿಕೊಂಡಿದ್ದಾರೆ. ನಂತರ ಕೆಲವೇ ಗಂಟೆಗಳಲ್ಲಿ ಊರಿನ ಹೊರವಲಯದ ಗೊಲ್ಲಾಳ ತಂದೆ ಮರಿಲಿಂಗಪ್ಪ ಅವರ ಜಮೀನಿನಲ್ಲಿರುವ ಮರಕ್ಕೆ ಇಬ್ಬರೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೇಮಿಗಳಿಬ್ಬರು ನೇಣಿಗೆ ಶರಣಾಗುವ ಮುನ್ನ ತಾವು ಮದುವೆ ಮಾಡಿಕೊಂಡಿರುವುದರ ಬಗ್ಗೆ ಸೆಲ್ಫಿ ಫೋಟೋ ತೆಗೆದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










