ಬೆಳಗಾವಿ: ಗಾಳಿಪಟ ಹಾರಿಸುವ ವೇಳೆ ಆಯತಪ್ಪಿ ಕಟ್ಟಡ ಮೇಲಿಂದ ಬಿದ್ದು ಬಾಲಕ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ಉಜ್ವಲ್ ನಗರದ ಸೆಕೆಂಡ್ ಕ್ರಾಸ್ ತಿರಂಗಾ ಕಾಲೋನಿಯ ಅರ್ಮಾನ್ ದಫೆದಾರ್(11) ಮೃತ ಬಾಲಕ.
ನಿನ್ನೆ ಅಶೋಕ ನಗರದ ತಮ್ಮ ಸಂಬಂಧಿಕರ ಮನೆಗೆ ಕುಟುಂಬಸ್ಥರ ಜೊತೆಗೆ ಬಾಲಕ ಬಂದಿದ್ದನು. ಈ ವೇಳೆ ಊಟ ಮಾಡಿದ ಬಳಿಕ ತನ್ನ ಅಣ್ಣನ ಜೊತೆಗೆ ಗಾಳಿಪಟ ಹಾರಿಸಲು ಕಟ್ಟಡದ ಟೆರಸ್ ಮೇಲೆ ಹೋಗಿದ್ದಾನೆ. ಈ ವೇಳೆ ಗಾಳಿಪಟ ಹಾರಿಸುವಾಗ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ.
ತಕ್ಷಣವೇ ಆತನನ್ನು ಖಾಸಗಿ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅರ್ಮಾನ್ ಇಂದು ಕೊನೆಯುಸಿರೆಳೆದಿದ್ದಾನೆ. ಮಗನನ್ನು ಕಳೆದುಕೊಂಡ ಕುಟುಂಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಬಗ್ಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










