ಅತೃಪ್ತ ಶಾಸಕರಿಗೆ ತಾತ್ಕಾಲಿಕ ರಿಲೀಫ್ ; ಜು.11ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್.

112
firstsuddi

ನವದೆಹಲಿ : ಮಹಾರಾಷ್ಟ್ರದಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. 16 ಶಾಸಕರಿಗೆ ಉಪಸಭಾಪತಿ ಹೊರಡಿಸಿದ್ದ ಅನರ್ಹತೆಯ ನೋಟಿಸ್ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮುಂದಿನ ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿದೆ.

ಮಹಾರಾಷ್ಟ್ರ ವಿಧಾನಸಭೆ ಉಪಸಭಾಪತಿ ನರಹರಿ ಜಿರ್ವಾಲ್ ಅವರು ನೀಡಿರುವ ಅನರ್ಹತೆಯ ನೋಟಿಸ್ ಪ್ರಶ್ನಿಸಿ ಬಂಡಾಯ ಶಾಸಕರು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಅವರ ರಜಾಕಾಲದ ಪೀಠವು, ಅನರ್ಹತೆ ನೋಟಿಸ್ ಗೆ ಉತ್ತರಿಸಲು 16 ಅತೃಪ್ತ ಶಾಸಕರಿಗೆ ಉಪಸಭಾಪತಿ ನೀಡಿದ ಸಮಯವನ್ನು ಜುಲೈ 12 ರವರೆಗೆ ವಿಸ್ತರಿಸಿದೆ.

ಏಕನಾಥ್ ಶಿಂಧೆ ಮತ್ತು ಇತರ 15 ಅತೃಪ್ತ ಶಾಸಕರು ಅನರ್ಹತೆ ನೋಟಿಸ್ ಕುರಿತು ಸುಪ್ರೀಂಕೋರ್ಟ್, ಮಹಾರಾಷ್ಟ್ರ ಸರ್ಕಾರ, ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕ, ಎನ್ಸಿಪಿ ಮುಖ್ಯಸ್ಥ ಹಾಗೂ ಡೆಪ್ಯೂಟಿ ಸ್ಪೀಕರ್ ಗೆ ನೋಟಿಸ್ ನೀಡಿದ್ದು, ಮುಂದಿನ ಐದು ದಿನಗಳಲ್ಲಿ ಉತ್ತರಿಸುವಂತೆ ತಿಳಿಸಿದೆ.

ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ, ತಮ್ಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಅನ್ನು ಏಕೆ ಸಂಪರ್ಕಿಸಿಲ್ಲ ಎಂದು ನ್ಯಾಯಾಲಯವು ಶಿವಸೇನೆಯ ಬಂಡಾಯ ಶಾಸಕ ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ಕೇಳಿದೆ. ಇದಕ್ಕೆ ತಮ್ಮ ಜೀವಕ್ಕೆ ಅಪಾಯವಿದ್ದು, ಮುಂಬೈನಲ್ಲಿ ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಪೂರಕವಾದ ವಾತಾವರಣ ಇಲ್ಲ ಎಂದು ಶಿಂಧೆ ಬಣ ತಿಳಿಸಿದೆ.