ಅತ್ತೆ, ಮಾವನ ಮೇಲಿನ ಸಿಟ್ಟಿಗೆ 40ಕ್ಕೂ ಹೆಚ್ಚು ಅಡಿಕೆ ಮರ ಕಡಿದು ಹಾಕಿದ ಸೊಸೆ.

42
firstsuddi

ದಾವಣಗೆರೆ: ಮಹಿಳೆಯೊಬ್ಬಳು ತನ್ನ ಅತ್ತೆ ಹಾಗೂ ಮಾವನ ಮೇಲಿನ ಸಿಟ್ಟಿಗೆ 40ಕ್ಕೂ ಹೆಚ್ಚು ಅಡಿಕೆ ಮರ ಕಡಿದು ಹಾಕಿರುವ ಘಟನೆ ತಾಲೂಕಿನ ಅವರಗೊಳ್ಳ ಗ್ರಾಮದಲ್ಲಿ ನಡೆದಿದೆ. ರೂಪಾ ಕುಮಾರಸ್ವಾಮಿ ಅಡಿಕೆ ಮರಗಳನ್ನು ಕಡಿದು ಹಾಕಿದ ಆರೋಪಿ ಸೊಸೆ.

ಘಟನೆ ವಿವರ: ಚಿದಾನಂದ ಸ್ವಾಮಿ ಹಾಗೂ ಶಿವನಾಗಮ್ಮ ದಂಪತಿಗೆ ಮೂವರು ಪುತ್ರರಿದ್ದಾರೆ. ಹಿರಿಯ ಪುತ್ರ ಕುಮಾರಸ್ವಾಮಿಗೆ ರೂಪಾಳೊಂದಿಗೆ ಮದುವೆ ಮಾಡಿಸಲಾಗಿತ್ತು. ಮದುವೆಯ ಬಳಿಕ ರೂಪಾ, ಮಾವ ಚಿದಾನಂದಸ್ವಾಮಿ ಬಳಿ 8 ಲಕ್ಷ ರೂಪಾಯಿ ಪಡೆದು ಮನೆ ಕೂಡ ಕಟ್ಟಿಸಿಕೊಂಡಿದ್ದಳು. ಅಲ್ಲದೇ ಹಲವಾರು ಬಾರಿ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಳು. ಆದರೆ ಅತ್ತೆ-ಮಾವ ಆಸ್ತಿಯಲ್ಲಿ ಪಾಲು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಕೋಪಗೊಂಡ ಸೊಸೆ ರೂಪಾ 3 ವರ್ಷದ 40 ಕ್ಕೂ ಹೆಚ್ಚು ಅಡಿಕೆ ಮರಗಳನ್ನ ಕಡಿದು ಹಾಕಿದ್ದಾಳೆ.

ಈ ಸಂಬಂಧ ಚಿದಾನಂದ ಸ್ವಾಮಿಯವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ, ನಮಗೆ ವಯಸ್ಸಾಗಿದೆ. ನಮ್ಮನ್ನ ಸರಿಯಾಗಿ ನೋಡಿಕೊಳ್ಳದೆ ಸೊಸೆ ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದಾಳೆ. ಸಾಲದು ಎಂಬಂತೆ ಮಚ್ಚು ತಂದು ಅಡಿಕೆ ಮರಗಳನ್ನು ಕಡಿದು ಹಾಕಿದ್ದಾಳೆ ಎಂದು ಆರೋಪಿಸಿದ್ದಾರೆ.

ಘಟನೆ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸದ್ಯ ಪೊಲೀಸರು ಆರೋಪಿ ರೂಪಾಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.