ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆರೋಪಿ ದುಬೈನಲ್ಲಿ ಸೆರೆ…

37
firstsuddi

ಬೆಂಗಳೂರು: ಅತ್ಯಾಚಾರ ಪ್ರಕರಣವೊಂದರಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ದುಬೈನಲ್ಲಿ ತಲೆಮರೆಸಿಕೊಂಡಿದ್ದ ಸಾಫ್ಟ್ ವೇರ್ ಉದ್ಯೋಗಿಯೊಬ್ಬನನ್ನು ಕೇಂದ್ರೀಯ ತನಿಖಾ ದಳ ಅಧಿಕಾರಿಗಳ ನೆರವು ಪಡೆದು ಮಹದೇವಪುರ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಕೇರಳ ಮೂಲದ ಮಿಧುನ್ ಚಂದ್ರ ಬಂಧಿತ ಆರೋಪಿ. ಈತ ನಗರದ ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದನು. ಸಂತ್ರಸ್ತೆ ಕೂಡ ಕೇರಳ ರಾಜ್ಯದವಳಾಗಿದ್ದು, ಆಕೆ ಸಹ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದಳು. ಆಗ ಇಬ್ಬರ ನಡುವೆ ಸ್ನೇಹ ಬೆಳೆದು ಅದು ಪ್ರೇಮಕ್ಕೆ ತಿರುಗಿದೆ. ಬಳಿಕ ಮಹದೇವಪುರ ಸಮೀಪ ಕೆಲ ತಿಂಗಳು ಇಬ್ಬರು ಲಿವಿಂಗ್​ ಟುಗೆದರ್​​ನಲ್ಲಿ ನೆಲೆಸಿದ್ದರು.

ಆದರೆ 2020ರಲ್ಲಿ ಮಿಧುನ್ ಹಾಗೂ ಆತನ ಗೆಳತಿ ಮಧ್ಯೆ ಮನಸ್ತಾಪವಾಯಿತು. ಆಗ ಪರಸ್ಪರ ಜಗಳ ಮಾಡಿಕೊಂಡು ಇಬ್ಬರು ಪ್ರತ್ಯೇಕವಾಗಿದ್ದರು. ನಂತರ ಮಿಧುನ್ ಚಂದ್ರ ಸಂತ್ರಸ್ತೆಯನ್ನು ಮದುವೆಯಾಗಲು ಹಿಂದೇಟು ಹಾಕಿದ್ದನು. ಈ ಸಂಬಂಧ 2020ರಲ್ಲಿ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಅತ್ಯಾಚಾರ ಪ್ರಕರಣದಡಿ ಆತನನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದರು. ಆದರೆ, ಜಾಮೀನು ಪಡೆದು ಜೈಲಿನಿಂದ ಹೊರಬಂದ ಆರೋಪಿ, ನಂತರ ನಗರ ತೊರೆದು ದುಬೈಗೆ ಪರಾರಿಯಾಗಿದ್ದ.

ಜಾಮೀನು ಪಡೆದು ಹೊರಬಂದ ಬಳಿಕ ಆರೋಪಿ ಮಿಧುನ್ ಬೆಂಗಳೂರು ತೊರೆದು ದುಬೈಗೆ ಹೋಗಿ ವಾಸವಾಗಿದ್ದನು. ಇತ್ತ ಅತ್ಯಾಚಾರ ಪ್ರಕರಣದ ವಿಚಾರಣೆಗೆ ದೀರ್ಘಾವಧಿಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಆತನ ಮೇಲೆ ಎಸಿಎಂಎಂ ನ್ಯಾಯಾಲಯವು ಬಂಧನ ವಾರೆಂಟ್ ಜಾರಿಗೊಳಿಸಿದೆ. ಈ ಸಂಬಂಧ ತನಿಖೆ ಕೈಗೆತ್ತಿಕೊಂಡ ಮಹದೇವಪುರ ಪೊಲೀಸರಿಗೆ ಮಿಧುನ್ ಚಂದ್ರ ದುಬೈನಲ್ಲಿರುವುದನ್ನು ಖಚಿತವಾಗಿದೆ.

ಆಗ ಸಿಬಿಐ ಇಂಟರ್‌ಫೋಲ್ ಮೂಲಕ ಆತನ ಮೇಲೆ ರೆಡ್ ಕಾರ್ನರ್ ನೋಟಿಸ್ ಅನ್ನು ಪೊಲೀಸರು ಜಾರಿಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಆತನನ್ನು ದುಬೈ ಪೊಲೀಸರು ವಶಕ್ಕೆ ಪಡೆದು ಇಂಟರ್‌ಫೋಲ್ ಅಧಿಕಾರಿಗಳ ಸುಪರ್ದಿಗೆ ವಹಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದು ಮಹದೇವಪುರ ಇನ್ಸ್ಪೆಕ್ಟರ್ ಪ್ರವೀಣ್ ಬಾಬು ನೇತೃತ್ವದ ತಂಡವು, ದುಬೈಗೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.