ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆಯ ಗರ್ಭಪಾತಕ್ಕೆ ಹೈಕೋರ್ಟ್ ಅನುಮತಿ…

71
firstsuddi

ಬೆಂಗಳೂರು : ಅತ್ಯಾಚಾರಕ್ಕೊಳಗಾದ 13 ವರ್ಷದ ಸಂತ್ರಸ್ತೆಯ 25 ವಾರಗಳ ಭ್ರೂಣ ತೆಗೆಸಲು ಹೈಕೋರ್ಟ್ ಅನುಮತಿ ನೀಡಿದೆ.

ಅತ್ಯಾಚಾರಕ್ಕೊಳಗಾಗಿ ಗರ್ಭ ಧರಿಸಿದ್ದ ಅಪ್ರಾಪ್ತೆ ಗರ್ಭಪಾತಕ್ಕೆ ಅನುಮತಿ ಕೋರಿ ತನ್ನ ತಾಯಿಯ ಮೂಲಕ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಬಾಲಕಿಯ ಗರ್ಭಪಾತಕ್ಕೆ ವಾಣಿವಿಲಾಸ್ ಆಸ್ಪತ್ರೆಗೆ ಸೂಚನೆ ನೀಡಿದೆ.

ವೈದ್ಯರು ಸಂತ್ರಸ್ತ ಬಾಲಕಿಯನ್ನು ತಪಾಸಣೆಗೊಳಪಡಿಸಿ ಅವರ ಜೀವಕ್ಕೆ ಹಾನಿಯಾಗುವಂತಿದ್ದರೆ, ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಭ್ರೂಣ ತೆಗೆಸಿದ ನಂತರ ಪ್ರಕರಣದ ತನಿಖೆಗೆ ನೆರವಾಗುವುದಕ್ಕಾಗಿ ಭ್ರೂಣವನ್ನು ಡಿಎನ್ ಎ ಪರೀಕ್ಷೆಗಾಗಿ ಕಾಯ್ದಿರಿಸಬೇಕು.

ಬಾಲಕಿಗೆ ಆಸ್ಪತ್ರೆಗೆ ಹೋಗುವುದು ಮತ್ತು ಬರುವುದಕ್ಕಾಗಿ ಪೊಲೀಸರು ವ್ಯವಸ್ಥೆ ಮಾಡಬೇಕು. ವೈದ್ಯರ ಸೂಚನೆ ಮೇರೆಗೆ ಹೆಚ್ಚುವರಿ ಚಿಕಿತ್ಸೆಗೂ ಇದೇ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಬೇಕು. ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದ ಭರಿಸಬೇಕು ಎಂದು ಸೂಚನೆ ನೀಡಿದೆ.