ಭುವನೇಶ್ವರ : ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಬಾಲಕಿಯೊಬ್ಬಳು ಶಾಲೆಯ ಕಟ್ಟಡದ ಮೇಲ್ಛಾವಣಿಯಿಂದ ಹಾರಿರುವ ಘಟನೆ ಒಡಿಶಾದ ಜಾಜ್ ಪುರ ಜಿಲ್ಲೆಯಲ್ಲಿ ನಡೆದಿದೆ. ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಭಾನುವಾರ ರಾತ್ರಿ ಬಾಲಕಿ ತನ್ನ ಸಹೋದರನೊಂದಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಳು. ಬಸ್ ನಿಂದ ಕೆಳಗಿಳಿದಾಗ ಆ ಪ್ರದೇಶದಲ್ಲಿ ಜೋರು ಮಳೆಯಾಗುತ್ತಿತ್ತು. ಈ ವೇಳೆ ಇವರಿಗೆ ಮಳೆ ಬರುತ್ತಿರುವ ಹಿನ್ನೆಲೆ ಶಾಲೆಯ ಕಟ್ಟಡದಲ್ಲಿ ಇರಬಹುದು. ಮಳೆ ನಿಂತ ಬಳಿಕ ತಮ್ಮ ಮನೆಗೆ ಹೊರಡಬಹುದು ಎಂದು ಕಿಡಿಗೇಡಿಗಳ ಗ್ಯಾಂಗ್ ಸಲಹೆ ನೀಡಿತ್ತು. ಮಳೆ ಬರುತ್ತಿರುವ ಹಿನ್ನೆಲೆ ಬಾಲಕಿ ಮತ್ತು ಆಕೆಯ ಸಹೋದರ ಶಾಲೆಯ ಕಟ್ಟದಲ್ಲಿ ಇರಲು ಒಪ್ಪಿಕೊಂಡರು. ಆದರೆ ರಾತ್ರಿ ಹಿಂತಿರುಗಿದ ಐವರು ಆರೋಪಿಗಳು ಬಾಲಕಿಯ ಸಹೋದರನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಬಾಲಕಿ ಮೇಲೆ ಐವರು ಅತ್ಯಾಚಾರವೆಸಗಲು ಪ್ರಯತ್ನಿಸಿದಾಗ, ಶಾಲೆಯ ಮೇಲ್ಛಾವಣಿ ಮೇಲೆ ಓಡಿ ಹೋದ ಬಾಲಕಿ ಅಲ್ಲಿಂದ ಕೆಳಗೆ ಜಿಗಿದು ತೀವ್ರವಾಗಿ ಗಾಯಗೊಂಡಿದ್ದಾಳೆ.
ಸಹಾಯಕ್ಕಾಗಿ ಸಹೋದರನ ಕಿರುಚಾಡುತ್ತಿರುವುದನ್ನು ಕೇಳಿ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸಂತ್ರಸ್ತೆಯ ಸಹೋದರನ ಹೇಳಿಕೆ ಆಧರಿಸಿ ಐವರನ್ನು ವಶಕ್ಕೆ ಪಡೆಯಲಾಗಿದೆ.










