ಅತ್ಯುತ್ತಮ ಫೀಲ್ಡಿಂಗ್‍ಗಾಗಿ ಚಿನ್ನದ ಪದಕ ಗೆದ್ದ ವಿರಾಟ್ ಕೊಹ್ಲಿ.

80
firstsuddi

ಚೆನ್ನೈ: ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಅತ್ಯುತ್ತಮ ಫೀಲ್ಡಿಂಗ್‍ಗಾಗಿ ಚಿನ್ನದ ಪದಕವನ್ನು ಪಡೆದಿದ್ದಾರೆ.

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್‍ನ ಐದನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗೆದ್ದ ಬಳಿಕ ಅತ್ಯುತ್ತಮ ಫೀಲ್ಡಿಂಗ್‍ಗಾಗಿ ಭಾರತ ತಂಡದ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರು ಕೊಹ್ಲಿಗೆ ಪದಕ ನೀಡಿ ಗೌರವಿಸಿದ್ದಾರೆ.

ಕೋಚ್ ಪದಕ ನೀಡುತ್ತಿರುವ ವೀಡಿಯೋವನ್ನು ಬಿಸಿಸಿಐ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಇದೇ ವೇಳೆ ಶ್ರೇಯಸ್ ಅಯ್ಯರ್ ಅವರ ಫೀಲ್ಡಿಂಗ್ ಪ್ರಯತ್ನಗಳಿಗಾಗಿ ಮೆಚ್ಚುಗೆಯನ್ನೂ ದಿಲೀಪ್ ಅವರು ವ್ಯಕ್ತಪಡಿಸಿದರು. ತಂಡದ ಒಟ್ಟಾರೆ ಪ್ರದರ್ಶನವನ್ನು ಅವರು ಶ್ಲಾಘಿಸಿದ್ದಾರೆ.

ನಿನ್ನೆ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಟೀಮ್ ಇಂಡಿಯಾ ದಾಳಿಗೆ ತತ್ತರಿಸಿತು. ಜಸ್​ಪ್ರೀತ್ ಬುಮ್ರಾ ಎಸೆದ ಪಂದ್ಯದ ಮೂರನೇ ಓವರ್​ನ 2ನೇ ಎಸೆತದಲ್ಲಿ ಮಿಚೆಲ್ ಮಾರ್ಷ್ ಅವರ ಬ್ಯಾಟ್​ಗೆ ತಾಗಿ ಚೆಂಡು ಸ್ಲಿಪ್​ನತ್ತ ಸಾಗಿತ್ತು. ಕ್ಷಣಾರ್ಧದಲ್ಲೇ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ವಿರಾಟ್ ಕೊಹ್ಲಿ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟಿದ್ದರು.

ಇದಾದ ಬಳಿಕ ಸ್ಪಿನ್ನರ್​ಗಳ ಮೋಡಿಗೆ ತಲೆಬಾಗಿದ ಆಸ್ಟ್ರೇಲಿಯನ್ನರು 49.3 ಓವರ್​ಗಳಲ್ಲಿ 199 ರನ್​ಗಳಿಗೆ ಆಲೌಟ್ ಆಗಿದ್ದರು. ಇನ್ನು 200 ರನ್​ಗಳ ಸುಲಭ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಗಿತ್ತು.

ಇಶಾನ್ ಕಿಶನ್ (0), ರೋಹಿತ್ ಶರ್ಮಾ (0) ಹಾಗೂ ಶ್ರೇಯಸ್ ಅಯ್ಯರ್ (0) ಶೂನ್ಯಕ್ಕೆ ಔಟಾಗಿ ಅಚ್ಚರಿ ಮೂಡಿಸಿದರು. ಇದಾಗ್ಯೂ ವಿರಾಟ್ ಕೊಹ್ಲಿ (85) ಹಾಗೂ ಕೆಎಲ್ ರಾಹುಲ್ (97) 4ನೇ ವಿಕೆಟ್​ಗೆ 165 ರನ್​ಗಳ ಜೊತೆಯಾಟವಾಡಿದರು. ಅಂತಿಮವಾಗಿ 41.2 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 201 ರನ್​ಗಳಿಸುವ ಮೂಲಕ ಟೀಮ್ ಇಂಡಿಯಾ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಮುಂಬರುವ ಪಂದ್ಯದಲ್ಲಿ ಭಾರತವು ಅಕ್ಟೋಬರ್ 11 ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ.