ಅದಾನಿ ಗ್ರೂಪ್‌ ವಿರುದ್ಧ ಜೆಪಿಸಿ ತನಿಖೆಗೆ ಆಗ್ರಹಿಸಿ ಪ್ರತಿಭಟನೆ – ಪ್ರತಿಪಕ್ಷಗಳ ನಾಯಕರು ವಶಕ್ಕೆ…

107
firstsuddi

ನವದೆಹಲಿ : ಅದಾನಿ ಸಮೂಹದ ಕಂಪನಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಹಿಂಡೆನ್‍ಬರ್ಗ್ ನೀಡಿರುವ ವರದಿ ಆಧರಿಸಿ ಜಂಟಿ ಸದನ ಸಮಿತಿ ತನಿಖೆಗೆ ನೀಡಬೇಕೆಂದು ಒತ್ತಾಯಿಸಿ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ 14 ಪಕ್ಷಗಳ ನಾಯಕರು ಪ್ರತಿಭಟನೆ ನಡೆಸಿದರು.

ಸಂಸತ್ ನಿಂದ ಮೆರವಣಿಗೆ ಹೊರಟ ನಾಯಕರು ವಿಜಯಚೌಕ್ ವರೆಗೂ ಮೆರವಣಿಗೆ ನಡೆಸಿದರು. ಸಂಸತ್ ಆವರಣದ ಸುತ್ತ ಬಿಗಿ ಭದ್ರತೆ ಏರ್ಪಡಿಸಿದ್ದ ದೆಹಲಿ ಪೊಲೀಸರು 144 ಸೆಕ್ಷನ್ ಜಾರಿ ಮಾಡಿ ವಿಜಯಚೌಕ್ ನಿಂದ ಮುಂದೆ ಪ್ರತಿಭಟನೆ ಮೆರವಣಿಗೆ ನಡೆಸದಂತೆ ಮನವಿ ಮಾಡಿದರು. ಅದಾಗ್ಯೂ ಪ್ರತಿಭಟನೆಗೆ ಪ್ರಯತ್ನಿಸಿದ ಎಲ್ಲ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಜಂಟಿ ಸಂಸದೀಯ ಸಮಿತಿಗೆ ಒತ್ತಾಯಿಸಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಜೆಪಿಸಿ ತನಿಖೆಗೆ ನೀಡುತ್ತಿಲ್ಲ, ಪ್ರಧಾನಿ ಮೋದಿ ಅವರು ಜನರಿಂದ ಏನನ್ನಾದರೂ ಮುಚ್ಚಿಡಲು ಬಯಸುತ್ತಿದ್ದಾರಾ ಎಂದು ಪ್ರಶ್ನಿಸಿದರು.