ಬೆಂಗಳೂರು: ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊರತೆಯಿಂದಾಗಿ ಹೆಚ್ಚುವರಿಯಾಗಿ ನೀಡುವ ಅಕ್ಕಿಯ ಬದಲು ಹಣ ಪಾವತಿ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಕ್ಯಾಬಿನೆಟ್ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಬಳಿಕ ಮಾತನಾಡಿದ ಸಚಿವ ಕೆ.ಹೆಚ್ ಮುನಿಯಪ್ಪ ಹಾಗೂ ಹೆಚ್.ಕೆ ಪಾಟೀಲ್, ಅನ್ನಭಾಗ್ಯ ಯೋಜನೆಗೆ ಅಕ್ಕಿ ಹೊಂದಿಸುವ ಬಗ್ಗೆ ಚರ್ಚೆ ನಡೆಸಲಾಯಿತು. ಕೇಂದ್ರ ಸರ್ಕಾರ ರಾಜ್ಯದ ಪ್ರಸ್ತಾಪ ತಿರಸ್ಕಾರ ಹಾಗೂ ಇತರೆ ರಾಜ್ಯಗಳಿಂದ ಅಕ್ಕಿ ಕೊಳ್ಳುವ ಮುಂದಿನ ನಡೆ ಬಗ್ಗೆ ಸಹ ಚರ್ಚೆ ನಡೆಸಲಾಯಿತು ಎಂದರು.
ಕೇಂದ್ರ ಸಚಿವರಿಗೆ ಮನವಿ ಮಾಡಿ ಒತ್ತಾಯ ಮಾಡಿದ್ದೆವು. 15ಲಕ್ಷ ಟನ್ ಅನ್ನು ಓಪನ್ ಟೆಂಡರ್ ಕರೆದು ಕೇಂದ್ರದವರು ಕೊಟ್ಟಿದ್ದಾರೆ. ಆದರೆ ನಮಗೆ ಅಕ್ಕಿ ಕೊಡಲು ನಿರಾಕರಣೆ, ರಾಜಕೀಯ ಮಾಡಿದರು. ಎಫ್ ಸಿಐ 34ರೂ. ದರ ಫಿಕ್ಸ್ ಮಾಡಿದ್ದಾರೆ. ಎಫ್ ಸಿಐ ರೇಟ್ ಗೆ ಬೇರೆ ಸಂಸ್ಥೆಗಳು ಅಕ್ಕಿ ಕೊಡಲು ಮುಂದೆ ಬರಲಿಲ್ಲ. ಅಕ್ಕಿ ದಾಸ್ತಾನು ತಯಾರಾಗುವ ತನಕ ಕೆಜಿಗೆ 34 ರೂ. ಹಣವನ್ನ ಕೊಡುತ್ತೇವೆ ಎಂದು ಕೆ.ಹೆಚ್ ಮುನಿಯಪ್ಪ ಹೇಳಿದರು.
ಕೇಂದ್ರ ಸರ್ಕಾರ ನಮಗೆ ಸಹಕರಿಸದ ಕಾರಣ ನಾವು ಮಾತು ಕೊಟ್ಟಂತೆ ಅಕ್ಕಿಯ ಬದಲು ಹಣ ಕೊಡುತ್ತೇವೆ. ಜುಲೈಯಿಂದ ಕೆ.ಜಿ.ಗೆ 34ರೂ ನಂತೆ ಕುಟುಂಬದ ಸದಸ್ಯರಿಗೆ ಅಕ್ಕಿಯ ಹಣ ನೀಡಲಾಗುತ್ತದೆ. ಒಂದು ತಿಂಗಳಿಗೆ 750 ರಿಂದ 800 ಕೋಟಿ ರೂ. ಹಣ ಬೇಕಾಗುತ್ತದೆ. ಅಕ್ಕಿ ವಿಚಾರವಾಗಿ ಟೆಂಡರ್ ಕರೆಯಲಾಗುತ್ತದೆ. ಟೆಂಡರ್ ಅಂತಿಮವಾದ ಬಳಿಕ ಅಕ್ಕಿ ಕೊಡುತ್ತೇವೆ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದರು.
ರೇಷನ್ ಕಾರ್ಡ್‍ನಲ್ಲಿರುವಂತೆ ಮನೆಯ ಯಜಮಾನಿಯ ಹೆಸರಿನ ಖಾತೆಗೆ ಹಣ ನೀಡಲಾಗುತ್ತದೆ. ಶೇಕಡಾ 95ರಷ್ಟು ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇದೆ. ಖಾತೆ ಇಲ್ಲದವರಿಗೆ ಪರಿಶೀಲಿಸಿ ಹಣ ನೀಡಲಾಗುವುದು. ಐದು ಕೆ.ಜಿಯಂತೆ ಒಬ್ಬ ವ್ಯಕ್ತಿಗೆ 170ರೂ. ಹಣ ಪಾವತಿ ಮಾಡಲಾಗುತ್ತದೆ. ಒಟ್ಟು 85 ಲಕ್ಷ ಬಿಪಿಎಲ್ ಕಾರ್ಡ್ ಗಳಿವೆ. ಟೆಂಡರ್ ಮೂಲಕ ಬೇಕಾದಷ್ಟು ಅಕ್ಕಿ ಸಂಗ್ರಹವಾದರೆ ಆದಷ್ಟು ಬೇಗ ಅಕ್ಕಿ ಪೂರೈಕೆ ಮಾಡುತ್ತೇವೆ ಎಂದು ಸಚಿವರು ವಿವರಿಸಿದರು.










