ಅನ್ಯ ಕೋಮಿನ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ!

171
firstsuddi

ಮೈಸೂರು : ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದಕ್ಕೆ ಹೆತ್ತ ತಂದೆಯೇ ಮಗಳನ್ನು ಹತ್ಯೆಗೈದಿರುವ ಘಟನೆ ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಗೊಲ್ಲರಬೀದಿಯ ನಿವಾಸಿ ಜಯರಾಂ ಎಂಬಾತ ಮಗಳನ್ನು ಕೊಂದ ಪಾಪಿ ತಂದೆಯಾಗಿದ್ದಾನೆ. ಈತನ ಮಗಳು ಗಾಯಿತ್ರಿ(19) ಎಂಬಾಕೆ ಮಚ್ಚಿನೇಟಿಗೆ ಬಲಿಯಾದವಳು. ಗಾಯತ್ರಿ ಅನ್ಯ ಕೋಮಿನ ಯುವಕನನ್ನು ಪ್ರೀತಿಸುತ್ತಿರುವ ವಿಚಾರ ಹೆತ್ತವರಿಗೆ ಗೊತ್ತಾಗಿತ್ತು. ಈ ವಿಷಯವಾಗಿ ಮನೆಯಲ್ಲಿ ಜಟಾಪಟಿ ನಡೆದಿತ್ತು. ಮಗಳ ಮನಸ್ಸನ್ನು ಬದಲಾಯಿಸಲು ತಂದೆ ಜಯರಾಂ ಸರ್ವ ರೀತಿಯಲ್ಲಿಯೂ ಪ್ರಯತ್ನ ಮಾಡಿದ್ದರು. ಆದರೆ ಗಾಯತ್ರಿ ಮಾತ್ರ ತಾನು ಆತನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಳು.

ನಿನ್ನೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತಂದೆ ಜಯರಾಂಗೆ ಮಗಳು ಗಾಯತ್ರಿ ಊಟ ತೆಗೆದುಕೊಂಡು ಹೋಗಿದ್ದಳು. ಊಟದ ಸಮಯದಲ್ಲಿ ಮತ್ತೆ ಮಗಳೊಂದಿಗೆ ಮಾತು ಶುರುಮಾಡಿದ ಜಯರಾಂ ನೀನು ಪ್ರೀತಿಸುತ್ತಿರುವ ಯುವಕ ನಮ್ಮ ಕೋಮಿನವನಲ್ಲ. ದಯವಿಟ್ಟು ಅವನನ್ನು ಬಿಟ್ಟು ಬಿಡು ಎಂದಿದ್ದಾನೆ. ಆಗ ಗಾಯತ್ರಿ ನಾನು ಮದುವೆಯಾಗುವುದಾದರೆ ಅವನನ್ನೇ ಮದುವೆಯಾಗುವುದು. ಈ ವಿಚಾರದಲ್ಲಿ ನಾನು ಯಾರ ಮಾತನ್ನೂ ಕೇಳುವುದಿಲ್ಲ ಎಂದಿದ್ದಾಳೆ. ಇದರಿಂದ ಕೋಪಗೊಂಡ ಜಯರಾಂ ತನ್ನ ಬಳಿಯಿದ್ದ ಮಚ್ಚಿನಿಂದ ಆಕೆಯ ಕುತ್ತಿಗೆ ಭಾಗಕ್ಕೆ ಬೀಸಿದ್ದಾನೆ. ಪರಿಣಾಮ ಗಾಯತ್ರಿ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಬಿಟ್ಟಿದ್ದಾಳೆ. ಮಗಳನ್ನು ಕೊಂದ ಬಳಿಕ ಜಯರಾಂ ನೇರವಾಗಿ ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ.

ಘಟನೆ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.