ಬೆಂಗಳೂರು: ವಿದ್ಯಾರ್ಥಿನಿಯೊಬ್ಬಳು ಅಪಾರ್ಟ್ಮೆಂಟ್ನ 12ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಿಗ್ಗೆ 10.30ರ ಸುಮಾರಿಗೆ ನಗರದ ಬೆಳ್ಳಂದೂರಿನ ಕ್ಲಾಸಿಕ್ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಜೆಸ್ಸಿಕಾ (14) ಎಂದು ಗುರುತಿಸಲಾಗಿದೆ. ಖಾಸಗಿ ಶಾಲೆಯಲ್ಲಿ ಜೆಸ್ಸಿಕಾ 10ನೇ ತರಗತಿ ಓದುತ್ತಿದ್ದಳು. ಕಳೆದ ಎರಡು ವರ್ಷದಿಂದ ಕ್ಲಾಸಿಕ್ ಅಪಾರ್ಟ್ಮೆಂಟ್ನಲ್ಲಿ ತಂದೆ ತಾಯಿ ಜೊತೆ ವಾಸವಾಗಿದ್ದಳು. ಅಪಾರ್ಟ್ಮೆಂಟ್ನ 11ನೇ ಮಹಡಿಯ ಫ್ಲ್ಯಾಟ್ ನಲ್ಲಿ ವಾಸವಾಗಿದ್ದರು. ಇವರು ಮೂಲತಃ ತಮಿಳುನಾಡಿನಿಂದ ಬಂದಿದ್ದರು. ತಂದೆ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ತಾಯಿ ಖಾಸಗಿ ಶಾಲೆಯಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದರು.
ಇನ್ನು 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಜೆಸ್ಸಿಕಾ, ಮಾನಸಿಕವಾಗಿ ನೊಂದಿದ್ದಳು ಎನ್ನಲಾಗಿದ್ದು, ಇದರಿಂದ ಇತ್ತೀಚೆಗೆ ಶಾಲೆಗೂ ಸಹ ಸರಿಯಾಗಿ ಹೊಗುತ್ತಿರಲಿಲ್ಲ. ಕಳೆದ ಮೂರು ತಿಂಗಳಲ್ಲಿ 6 ದಿನ ಮಾತ್ರ ತರಗತಿಗೆ ಹೋಗಿದ್ದಳಂತೆ. ಈ ಹಿನ್ನೆಲೆಯಲ್ಲಿ ಬಾಲಕಿ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಘಟನೆ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










