ಚಿಕ್ಕಬಳ್ಳಾಪುರ : ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಮೂವರು ಕಾಮುಕರನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿನಿ ತನ್ನ ಪ್ರಿಯಕರನ ಜೊತೆ ಜಿಲ್ಲೆಯ ಬಾಗೇಪಲ್ಲಿ ಪಟ್ಟಣ ಹೊರವಲಯದ ಪಾತಬಾಗೇಪಲ್ಲಿ ಬಳಿಯ ನಿರ್ಜನ ಪ್ರದೇಶದ ಬೆಟ್ಟಕ್ಕೆ ತೆರಳಿದ್ದಳು. ಇತ್ತ ಹುಡುಗಿ ಹಾಗೂ ಪ್ರಿಯಕರ ನಿರ್ಜನ ಪ್ರದೇಶದಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗ ಪ್ರಿಯಕರನ ಸ್ನೇಹಿತ ಮಂಜು ಹಾಗೂ ಅಲ್ಲಿಯೇ ಮದ್ಯಪಾನದಲ್ಲಿ ತೊಡಗಿದ್ದ ನಾಗರಾಜು, ಸುರೇಶ್ ಸೇರಿ ಪ್ರೇಮಿಗಳ ಸರಸ ಸಲ್ಲಾಪದ ವೀಡಿಯೋ ರೆಕಾರ್ಡ್ ಮಾಡಿಕೊಂಡು ತಮಗೂ ಸಹಕರಿಸುವಂತೆ ಒತ್ತಡ ಹೇರಿ ಬ್ಲಾಕ್ ಮೇಲ್ ಮಾಡಿದ್ದಾರೆ. ಈ ವೇಳೆ ನಾರಾಯಣಸ್ವಾಮಿ ಅಲ್ಲಿಂದ ಓಡಿ ಬಂದು ಸ್ಥಳೀಯರಿಗೆ ವಿಷಯ ತಿಳಿಸಿದ್ದಾನೆ.
ಕೂಡಲೇ ಸ್ಥಳೀಯರು ಬೆಟ್ಟದ ಕಡೆಗೆ ಹೋಗಿ ಹುಡುಗಿಯನ್ನು ರಕ್ಷಣೆ ಮಾಡಿ ಮೂವರು ಯುವಕರನ್ನು ಹಿಡಿದಿದ್ದಾರೆ. ನಂತರ ಹುಡುಗಿ, ನಾರಾಯಣಸ್ವಾಮಿ ಸೇರಿದಂತೆ ಮೂವರು ಯುವಕರನ್ನು ಬಾಗೇಪಲ್ಲಿ ಪೊಲೀಸರು ವಶಕ್ಕೆ ಪಡೆದು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಹುಡುಗಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿಯ ಬಾಲಕಿಯರ ಬಾಲಮಂದಿರದಲ್ಲಿ ರಕ್ಷಣೆ ನೀಡಲಾಗಿದೆ.










