ಮೈಸೂರು: ಅಪ್ರಾಪ್ತೆಯೊಂದಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿವಾಹವಾಗಿದ್ದು, ಇವರ ವಿರುದ್ಧ ಗ್ರಾಮಸ್ಥರೇ ದಾಖಲೆ ಸಮೇತ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಗೆ ದೂರು ಸಲ್ಲಿಸಿದ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.
ಹಾಡ್ಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹಾಗೂ ಕ್ಲಾಸ್ ಒನ್ ಸಿವಿಲ್ ಗುತ್ತಿಗೆದಾರ ಹರೀಶ್ ಕುಮಾರ್ 2023ರ ಫೆ.15ರಂದು ನಂಜನಗೂಡು ಪಟ್ಟಣದ ಹುಲ್ಲಹಳ್ಳಿ ರಸ್ತೆಯಲ್ಲಿರುವ ಶ್ರೀ ಕಮಲಮ್ಮ ಗುರುಮಲ್ಲಪ್ಪ ಛತ್ರದಲ್ಲಿ 17 ವರ್ಷದ ಬಾಲಕಿಯನ್ನು ವಿವಾಹವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಒಂದೇ ಜಾತಿಯವರು ಮತ್ತು ತಾಲ್ಲೂಕಿನ ಹರಿಯೂರು ಗ್ರಾಮದವರಾಗಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದ (ಕೆಆರ್‌ಆರ್‌ಎಸ್) ಉಪಾಧ್ಯಕ್ಷ ಮಹೇಶ್ ನೇತೃತ್ವದಲ್ಲಿ ಹರಿಯೂರು ಗ್ರಾಮಸ್ಥರು ನಂಜನಗೂಡಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಅವರಿಗೆ ದೂರು ದಾಖಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಹರೀಶ್ ಕುಮಾರ್ ಫೆಬ್ರವರಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿದ್ದು, ಮದುವೆಗೆ ಯಾವುದೇ ತೊಂದರೆಯಾಗದಂತೆ ಆಧಾರ್ ಕಾರ್ಡ್‌ನಲ್ಲಿ ಆಕೆಯ ಜನ್ಮ ದಿನಾಂಕವನ್ನು ಬದಲಾಯಿಸಿದ್ದಾರೆ ಎಂದು ಮಹೇಶ್ ದೂರಿನಲ್ಲಿ ತಿಳಿಸಿದ್ದಾರೆ.
ಶಾಲಾ ದಾಖಲಾತಿ ಪ್ರಕಾರ ಬಾಲಕಿಯ ಜನ್ಮ ದಿನಾಂಕ 2005ರ ಮೇ 19 ಆಗಿದೆ. ಆಕೆಗೆ ಇನ್ನೂ 18 ವರ್ಷ ತುಂಬಿಲ್ಲ. ಹೀಗಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷನ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೋಕ್ಸೊ ಕಾಯ್ದೆ, 2012 ಮತ್ತು ಸೆಕ್ಷನ್ 9,10 ಮತ್ತು 11 (ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.










