ನ್ಯೂಯಾರ್ಕ್: ಅಮೇರಿಕಾದ ಜಿಮ್ ನಲ್ಲಿ ಚಾಕು ಇರಿತಕ್ಕೆ ಒಳಗಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದೆ. ಜೀವ ರಕ್ಷಕ ವ್ಯವಸ್ಥೆ (ಲೈಫ್ ಸಪೋರ್ಟ್)ಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ವಿದ್ಯಾರ್ಥಿ ಪಿ. ವರುಣ್ ರಾಜ್ (24) ಅಮೆರಿಕದಲ್ಲಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದ. ಕಳೆದ ಭಾನುವಾರ ಬೆಳಗ್ಗೆ ದುಷ್ಕರ್ಮಿ, ಚಾಕುವಿನಿಂದ ವರುಣ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂರು ದಿನಗಳ ಚಿಕಿತ್ಸೆ ಬಳಿಕ ವಿದ್ಯಾರ್ಥಿಗೆ ಜೀವ ರಕ್ಷಕ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ದೇಹದ ನರಗಳಿಗೆ ತುಂಬಾ ಹಾನಿಯಾಗಿದೆ. ಶಾಶ್ವತವಾಗಿ ಅಂಗವೈಕಲ್ಯ ಹೊಂದುವ ಸಾಧ್ಯತೆ ಇದೆ. ದೃಷ್ಟಿ ನಷ್ಟ, ದೇಹದ ಎಡಭಾಗದ ಅಂಗಗಳು ಸ್ವಾಧೀನ ಕಳೆದುಕೊಳ್ಳಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಯ ಬೆನ್ನಲ್ಲೇ, ದಾಳಿ ನಡೆಸಿದ ವ್ಯಕ್ತಿಯನ್ನು ಮಾರಣಾಂತಿಕ ಆಯುಧದಿಂದ ಕೊಲೆ ಯತ್ನದ ಆರೋಪದಡಿ ಬಂಧಿಸಲಾಗಿದೆ. ಗಂಭೀರ ಸ್ಥಿತಿಯ ಕಾರಣದಿಂದ ವಿದ್ಯಾರ್ಥಿಯನ್ನು ಫೋರ್ಟ್ ವೇನ್‌ನಲ್ಲಿರುವ ಲುಥೆರನ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ವಿದ್ಯಾರ್ಥಿ ಮೇಲೆ ನಡೆದ ಕ್ರೂರ ದಾಳಿಯ ಬಗ್ಗೆ ವಿಶ್ವವಿದ್ಯಾನಿಲಯದ ಅಧ್ಯಕ್ಷರು ಆಘಾತ ವ್ಯಕ್ತಪಡಿಸಿದ್ದಾರೆ.










