ಅರ್ಜುನನ ಕಾಲಿಗೆ ಗುಂಡೇಟು ಬಿದ್ದಿಲ್ಲ- ಸಾವಿನ ರಹಸ್ಯ ಬಿಚ್ಚಿಟ್ಟ ವೈದ್ಯ…

53
firstsuddi

ಹಾಸನ: ಅರ್ಜುನನ ಕಾಲಿಗೆ ಯಾವುದೇ ಗುಂಡೇಟು ಬಿದ್ದಿಲ್ಲ. ನಮ್ಮ ಕಾರ್ಯಾಚರಣೆ ತಂಡದ ಬಳಿ ಬಂದೂಕು ಇರಲಿಲ್ಲ. ನಮ್ಮ ಸಿಬ್ಬಂದಿ ಬಳಿ ಇದ್ದದ್ದು ಡಬಲ್ ಬ್ಯಾರೆಲ್ ಚರ್ರೆ ಕೋವಿ ಮಾತ್ರ ಅದರಲ್ಲಿ ಆನೆ ಸಾಯುವುದಿಲ್ಲ ಎಂದು ವನ್ಯಜೀವಿ ವೈದ್ಯ ರಮೇಶ್ ಹೇಳಿದ್ದಾರೆ.

ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ದಸರಾ ಆನೆ ಅರ್ಜುನನ ಸಾವು ಪ್ರಕರಣದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅರ್ಜುನ ತಾನು ಪ್ರಾಣ ಬಿಟ್ಟು ನಮ್ಮನ್ನ ಉಳಿಸಿದ್ದಾನೆ. ನಾನು ನಿತ್ಯ ಹೊರ ಬರುವಾಗ ಅರ್ಜುನನಿಗೆ ಕೈ ಮುಗಿದು ಬರಬೇಕು. ನಾವು ಬದುಕಿರೋದು ಅರ್ಜುನನಿಂದ ಎಂದು ಅರ್ಜುನನ ಸಾವು ನೆನೆದು ಭಾವುಕರಾದರು. ಕಾರ್ಯಾಚರಣೆ ದಿನ ಅಂದರೆ ಡಿಸೆಂಬರ್ 4 ರಂದು ನಾನು, ಆನೆ ಮಾವುತ ವಿನು, ಹಾಗೂ ಕರ್ನಾಟಕ ಭೀಮ ಆನೆ ಮಾವುತ ಗುಂಡ ಅರ್ಜುನನ ಮೇಲೆ ಇದ್ದೆವು. ಪ್ರಶಾಂತ್ ಆನೆ ಮೇಲೆ ಕೊಡಗಿನ ಡಿಆರ್‌ಎಫ್‌ಓ ರಂಜನ್ ಇದ್ದರು. ವಿಕ್ರಾಂತ್ ಹೆಸರಿನ ಒಂದು ಹಾಗೂ ಮತ್ತೊಂದು ಸಲಗ ಸೇರಿ ಎರಡು ಆನೆಗಳ ಸೆರೆಗೆ ಟಾರ್ಗೆಟ್ ಫಿಕ್ಸ್ ಆಗಿತ್ತು ಎಂದು ಕಾರ್ಯಾಚರಣೆಯ ಇಂಚಿಂಚು ಮಾಹಿತಿಯನ್ನು ಬಿಚ್ಚಿಟ್ಟರು.

ವಿಕ್ರಾಂತ್ ಆನೆ ಎದುರಾದರೆ ನಾನು ಹಾಗೂ ಇನ್ನೊಂದು ಆನೆ ಎದುರಾದರೆ ರಂಜನ್ ಅರವಳಿಕೆ ಮದ್ದು ನೀಡುವ ನಿರ್ಧಾರ ಆಗಿತ್ತು. ಅದರಂತೆ ನಾವು ಕಾಡಿನೊಳಗೆ ಎಂಟ್ರಿ ಆದಾಗ ಒಂದು ಆನೆಯ ಗುಂಪು ಕಾಣಿಸಿತು. ಅದರಲ್ಲಿ ವಿಕ್ರಾಂತ್ ಆನೆ ಇರಲಿಲ್ಲ. ನಾವು 400 ಮೀಟರ್ ಮುಂದೆ ಹೋದಾಗ ಒಂದು ಆನೆ ಕಾಣಿಸಿತು. ಕಾಡಿನಲ್ಲಿ ಲಂಟಾನ ಹೆಚ್ಚಾಗಿ ಬೆಳೆದಿದ್ದರಿಂದ ಆನೆಯ ಮುಖ ಕಾಣಲಿಲ್ಲ. ಆನೆಯ ಹಿಂಬದಿಯ ಸ್ವಲ್ಪ ಭಾಗ ಕಾಣುತ್ತಿದ್ದಾಗ ಅದು ಸಣ್ಣ ಆನೆ ಎಂದು ಭಾವಿಸಿದೆವು. ಅಲ್ಲಿರುವ ಆನೆ ನಮ್ಮ ಟಾರ್ಗೆಟ್ ಆನೆಯಾ ಅಥವಾ ಹೆಣ್ಣಾನೆಯಾ ಎಂಬುದು ಖಾತ್ರಿ ಆಗಬೇಕಿತ್ತು. ನಾವು ಮೇಲಿದ್ದೆವು, ಆ ಒಂಟಿಸಲಗ ಕೆಳಗೆ ಇತ್ತು. ಇದು ದೊಡ್ಡ ಆನೆ ಎಂದು ಖಾತ್ರಿ ಆದಾಗ ಆನೆಗೆ ಸುತ್ತುವರಿದೆವು. ಇದನ್ನು ಡಾಟ್ ಮಾಡುವ ಬಗ್ಗೆ ರಂಜನ್ ಮತ್ತು ನಾವು ಮಾತನಾಡಿಕೊಂಡು ನಾನು ಡಾಟ್ ಮಾಡುತ್ತೇನೆ ಎಂದು ಹೇಳಿ ನಾನು ನನ್ನ ಅರವಳಿಕೆ ಸಜ್ಜು ಮಾಡಿಕೊಂಡೆ. ಪ್ರಸರ್ ಫಿಕ್ಸ್ ಮಾಡಿ ಡಾಟ್ ಮಾಡಲು ರೆಡಿಯಾಗಿದ್ದ ವೇಳೆಗೆ ಆ ಆನೆ ಏಕಾಏಕಿ ದಾಳಿ ಮಾಡಿತು. ಅದು ಮುಖವನ್ನು ಮುಂದೆ ಮಾಡಿ ಬಂದಿದ್ದರಿಂದ ನಾನು ಮುಖಕ್ಕೆ ಡಾಟ್ ಮಾಡಲು ಆಗಲಿಲ್ಲ ಎಂದರು.

ಯಾವುದೇ ಆನೆಯ ಮುಖದ ಭಾಗಕ್ಕೆ, ಹೊಟ್ಟೆಗೆ ಇಂಜೆಕ್ಷನ್ ಹೊಡೆಯುವ ಹಾಗಿಲ್ಲ. ಅಕಸ್ಮಾತ್ ಹಾಗೆ ಇಂಜೆಕ್ಟ್ ಆದರೆ ಆನೆಯ ಜೀವಕ್ಕೆ ಅಪಾಯ ಇದೆ. ಹಾಗಾಗಿ ಆಗ ಡಾಟ್ ಮಾಡಲು ಆಗಲಿಲ್ಲ. ಏಕಾಏಕಿ ಅರ್ಜುನನ ಮೇಲೆ ಆನೆ ದಾಳಿ ಮಾಡಿದಾಗ ನಾವೆಲ್ಲಾ ಕೆಳಗೆ ಬೀಳುವಂತೆ ಆದೆವು. ಈ ವೇಳೆಯಲ್ಲಿ ನನ್ನ ಕೈಯಲ್ಲಿದ್ದ ಅರವಳಿಕೆ ಟ್ರಿಗರ್ ಆಗಿ ಫೈರ್ ಆಗಿದೆ. ಅದು ಆಕಾಶದ ಕಡೆಗೆ ಹಾರಿ ಕೆಳಗೆ ಬೀಳುವಾಗ ಪ್ರಶಾಂತ್ ಕಾಲಿಗೆ ಬಿದ್ದಿದೆ. ಅದು ನನಗೆ ಮಾಹಿತಿ ಇರಲಿಲ್ಲ. ಪ್ರಶಾಂತ್‌ಗೆ ಅರವಳಿಕೆ ಮದ್ದು ಬಿದ್ದ ಬಗ್ಗೆ ಗೊತ್ತಾದ ಕೂಡಲೇ ನಾನು ಓಡಿದೆ. ಅಷ್ಟರಲ್ಲಿ ಅರ್ಜುನ ಕಾಡಾನೆ ಜೊತೆ ಫೈಟ್ ಮಾಡಿ ಓಡಿಸಿತ್ತು. ನಾವು ಪ್ರಶಾಂತ್ ಆನೆ ಬಳಿ ಬಂದು ಅಲ್ಲಿ ರಿವರ್ಸ್ ಇಂಜೆಕ್ಷನ್ ಕೊಡುವ ವೇಳೆಗೆ ಕಾಡಾನೆ ಮತ್ತೆ ಬಂದು ಜಗಳಕ್ಕೆ ಬಿದ್ದಿದೆ. ಅರ್ಜುನನ ಮಾವುತ ವಿನು ಕೂಡ ನನ್ನೊಟ್ಟಿಗೆ ಇದ್ದಿದ್ದರಿಂದ ಅಲ್ಲಿ ಮತ್ತೊಬ್ಬ ಹುಡುಗ ಅರ್ಜುನನ ಮೇಲಿದ್ದ. ನಾವು ವಾಪಸ್ ಓಡುವ ವೇಳೆಗೆ ಅಲ್ಲಿ ಎರಡೂ ಆನೆಗಳ ನಡುವೆ ಜಗಳ ಶುರುವಾಗಿತ್ತು. ನಾನು ಮತ್ತೊಂದು ಸುತ್ತು ಅರವಳಿಕೆ ಲೋಡ್ ಮಾಡಿ ಕಾಡಾನೆಗೆ ಹೊಡೆದೆ. ಆದರೆ ಆ ಆನೆ ಕೆಳಗೆ ಬೀಳಲಿಲ್ಲ. ಅಷ್ಟು ಹೊತ್ತಿಗೆ ಅರ್ಜುನನಿಗೆ ಗಂಭೀರವಾಗಿ ಗಾಯವಾಗಿ ಕೆಳಗೆ ಬಿದ್ದಿದ್ದ. ಈ ಆನೆಗಳ ಕಾಳಗ ಶುರುವಾದಾಗ ಬೇರೆ ಆನೆಗಳು ಹೆದರಿ ಓಡಿವೆ ಎಂದು ತಿಳಿಸಿದರು.

ಜನರು ದಸರಾ ಅಂಬಾರಿ ಹೊತ್ತಾಗ ಮಾತ್ರ ಅರ್ಜುನನ ನೋಡಿರುತ್ತಾರೆ. ನಾವು ನಿತ್ಯ ಅವನ ಜೊತೆ ಇರುವವರು ನಮಗೆ ಆಗಿರುವ ನೋವು ಹೇಳಲು ಆಗಲ್ಲ. ನಾನು ಇದುವರೆಗೆ 65 ಆನೆ ಸೆರೆ ಕಾರ್ಯಾಚರಣೆ ಮಾಡಿದ್ದೇನೆ. 40 ಆನೆಗಳಿಗೆ ನಾನೇ ಅರವಳಿಕೆ ಡಾಟ್ ಮಾಡಿದ್ದೇನೆ. 7 ಹುಲಿ, 50 ಕ್ಕೂ ಹೆಚ್ಚು ಚಿರತೆ, 10 ಕರಡಿ ಡಾಟ್ ಮಾಡಿದ್ದೇನೆ. ಎಲ್ಲವು ಕೂಡ ಯೋಜನೆಯಂತೆಯೇ ನಡೆಯುತ್ತೆ. ಆದರೆ ಕಾಡಾನೆ ದಾಳಿಯಿಂದ ಅರ್ಜುನ ಮೃತಪಟ್ಟಿದೆ. ಬಹುಶಃ ಮಾವುತ ವಿನು ಅರ್ಜುನನ ಮೇಲೆ ಇದ್ದಿದ್ದರೆ ಹೋರಾಟ ಮಾಡಬಹುದಿತ್ತಾ ಅಥವಾ ಆಗಲೂ ಹೀಗೆ ಆಗುತ್ತಿತ್ತಾ ಎಂದು ಹೇಳೋದು ಕಷ್ಟ ಎಂದು ಅರ್ಜುನನ ಸಾವಿನ ಬಗ್ಗೆ ಹರಡಿದ್ದ ಹಲವು ವದಂತಿಗಳಿಗೆ ಸ್ಪಷ್ಟನೆ ನೀಡಿದರು.