ಆಕಸ್ಮಿಕ ಬೆಂಕಿ ತಗುಲಿ ಮೂರು ಅಂಗಡಿಗಳು ಭಸ್ಮ.

34

ಬಳ್ಳಾರಿ: ಆಕಸ್ಮಿಕವಾಗಿ ಬೆಂಕಿ ತಗುಲಿ ಮೂರು ಅಂಗಡಿಗಳು ಸುಟ್ಟು ಕರಕಲಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್‍ನ ಜಿಂದಾಲ್ ಕಾರ್ಖಾನೆ ಬೈಪಾಸ್ ಬಳಿ ನಡೆದಿದೆ. ಘಟನೆಯಲ್ಲಿ ಹೋಟೆಲ್, ಎಲೆಕ್ಟ್ರಿಕಲ್ ಹಾಗೂ ಆಟೋಮೊಬೈಲ್ ಶಾಪ್ ಬೆಂಕಿಗಾಹುತಿಯಾಗಿದ್ದು, ಬೆಂಕಿಯ ಕೆನ್ನಾಲೆಗೆ ಸಿಕ್ಕು ಅಂಗಡಿಯಲ್ಲಿನ ವಸ್ತುಗಳೆಲ್ಲವೂ ಸುಟ್ಟುಹೋಗಿವೆ. ಎಲೆಕ್ಟ್ರಿಕ್ ವಸ್ತುಗಳು, ಎಲೆಕ್ಟ್ರಿಕ್ ಬ್ಯಾಟರಿಗಳು ಹಾಗೂ ಹೋಟೆಲ್‍ನ ಫ್ರಿಜ್, ಚೇರ್, ಟೇಬಲ್ ಸೇರಿ ಅಂದಾಜು 30 ಲಕ್ಷದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಇನ್ನೂ ಬೆಂಕಿ ತಗುಲಿ ದಟ್ಟ ಹೊಗೆ ಆವರಿಸಿದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಮಾಹಿತಿ ತಿಳಿದು ಅಗ್ನಿಶಾಮಕ ದಳದವರು ಸ್ಥಳಕ್ಕೆ ಬರುವಷ್ಟರಲ್ಲಿ ಮೂರೂ ಅಂಗಡಿಗಳು ಸುಟ್ಟು ಕರಕಲಾಗಿ ಹೋಗಿದ್ದವು. ಘಟನೆ ಸಂಬಂಧ ತೋರಣಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.