ಆನೇಕಲ್: ನಗರದ ಹೊರ ವಲಯದ ಆನೇಕಲ್ನಲ್ಲಿ ದುಷ್ಕರ್ಮಿಯೊಬ್ಬ ವಕೀಲರ ಬೆನ್ನಿಗೆ ಚಾಕು ಇರಿದು ಪರಾರಿ ಆಗಿರುವ ದುರ್ಘಟನೆ ಆನೇಕಲ್ ಪೊಲೀಸ್ ಠಾಣೆ ಬಳಿ ನಡೆದಿದೆ.
ಆನೇಕಲ್ ನಿವಾಸಿ ಮಂಜುನಾಥ್ ಚೂರಿ ಇರಿತಕ್ಕೊಳಗಾದ ವಕೀಲನಾಗಿದ್ದು, ಕಮ್ಮಸಂದ್ರ ಅಗ್ರಹಾರದ ರಮೇಶ್ ಆರೋಪಿಯಾಗಿದ್ದಾನೆ.
ವಕೀಲರು ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಂದ ಆರೋಪಿ ಬೆನ್ನಿಗೆ ಮತ್ತು ಕೈಗೆ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿದ್ದಾನೆ. ಇನ್ನು ವಕೀಲರ ಬೆನ್ನಿಗೆ ಮೂರುಬಾರಿ ಚಾಕುವಿನಿಂದ ಇರಿಯಲಾಗಿದೆ. ಬೆನ್ನಿಗೆ ಮೂರು ಬಾರಿ ಇರಿದ ನಂತರ ತಪ್ಪಿಸಿಕೊಳ್ಳಲು ಕೈ ಅಡ್ಡ ಹಿಡಿದಾಗ ಕೈಗೂ ಚಾಕುವಿನಿಂದ ಕೊಯ್ದಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಗಂಭೀರ ಗಾಯಗೊಂಡ ವಕೀಲ ಮಂಜುನಾಥ ಅವರನ್ನು ಆನೇಕಲ್ ಸಾರ್ವಜನಿಕ ಆಸ್ಪತ್ರೆಗೆ ಪ್ರಾಥಮಿಕ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಇದೀಗ ನಾರಾಯಣ ಹೆಲ್ತ್ ಸಿಟಿಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ.
ಇನ್ನು ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಆನೇಕಲ್ ಇನ್ಸ್ಪೆಕ್ಟರ್ ತಿಪ್ಪೇಸ್ವಾಮಿ ತನಿಖೆ ಮುಂದುವರೆಸಿದ್ದಾರೆ.










