ಬೀದರ್ : ಆನ್‍ಲೈನ್‍ನಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾದ ಉಪನ್ಯಾಸಕಿಯೊಬ್ಬರು ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ನಡೆದಿದೆ.
ಆರತಿ ಕನಾಟೆ (28) ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕಿ. ಬಸವಕಲ್ಯಾಣ ನಗರದ ಖಾಸಗಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆನ್ ಲೈನ್ ನಲ್ಲಿ ಮನೆಯಲ್ಲೇ ಕುಳಿತು ಉದ್ಯಮ ಮಾಡಲು ಹಣ ಹೂಡಿಕೆ ಮಾಡಿ ಎಂದ ವ್ಯಕ್ತಿಯನ್ನು ನಂಬಿದ ಉಪನ್ಯಾಸಕಿ ಬರೋಬ್ಬರಿ 2.50 ಲಕ್ಷ ವರೆಗೆ ಹಣ ಕಳುಹಿಸಿದ್ದಾರೆ. ಬಳಿಕ ಇನ್ನೂ 82 ಸಾವಿರ ಹಣ ಕಳಿಸಿದ್ರೆ ಉದ್ಯೋಗದ ಜೊತೆಗೆ ಹೂಡಿಕೆ ಮಾಡಿದ ಎಲ್ಲಾ ಹಣವನ್ನು ವಾಪಸ್ ಕೊಡುವುದಾಗಿ ತಿಳಿಸಿದ್ದಾನೆ.
ಆದರೆ ಮನೆಯವರ ಗಮನಕ್ಕೆ ತಾರದೆ ಲಕ್ಷಾಂತರ ರೂಪಾಯಿ ಕಳೆದುಕೊಂಡ ಭೀತಿಯಿಂದ ಉಪನ್ಯಾಸಕಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಹಣ ಹೂಡಿಕೆ ಮಾಡಿದ್ದ ಏಜೆನ್ಸಿ ಬಗ್ಗೆ ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಬಸವಕಲ್ಯಾಣ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










