ಆರತಕ್ಷತೆ ವೇಳೆಯೇ ಹೃದಯಾಘಾತದಿಂದ ಮೃತಪಟ್ಟ ಮದುಮಗ!

53
firstsuddi

ವಿಜಯನಗರ : ನವದಂಪತಿಗಳಿಬ್ಬರೂ ಮದುವೆ ಆರತಕ್ಷತೆಯಲ್ಲಿ ಸಂಭ್ರಮಿಸುತ್ತಿದ್ದರು. ಆದರೆ ವಿಧಿ ಅವರ ಬಾಳಲ್ಲಿ ಬೇರೆಯದ್ದೇ ಆಟ ಆಡಿತ್ತು. ಹೊಸ ಬದುಕು ಪ್ರಾರಂಭಿಸಬೇಕಾಗಿದ್ದ ವರನ ಬದುಕೇ ಮುಗಿದು ಹೋಗಿತ್ತು. ಹೌದು ಮದುವೆ ಆರತಕ್ಷತೆ ವೇಳೆ ದಿಢೀರನೇ ಎದೆನೋವು ಕಾಣಿಸಿಕೊಂಡು ಮದುಮಗ ಸಾವನ್ನಪ್ಪಿದ ಮನಕಲಕುವ ಘಟನೆ ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹೊನ್ನೂರಸ್ವಾಮಿ (26) ಮೃತ ಮದುಮಗ. ನಿನ್ನೆ ಗ್ರಾಮದ ಸುಡುಗಾಡಪ್ಪನ ದೇವಸ್ಥಾನದಲ್ಲಿ ಹೊನ್ನೂರಸ್ವಾಮಿ ವಿವಾಹವಾಗಿದ್ದರು. ನಂತರ ವಿವಾಹ ಆರತಕ್ಷತೆ ಕಾರ್ಯಕ್ರಮದ ವೇಳೆ ವರ ಹೊನ್ನೂರಸ್ವಾಮಿಗೆ ಎದೆ ನೋವು ಕಾಣಿಸಿಕೊಂಡು ದಿಢೀರ್ ಕುಸಿದುಬಿದ್ದು ಅಸ್ವಸ್ಥಗೊಂಡಿದ್ದರು.

ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಲೋ ಬಿಪಿ ಇದ್ದುದರಿಂದ ತಕ್ಷಣ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸಲಹೆ ನೀಡಿದ್ದಾರೆ. ಆದರೆ ಅಲ್ಲಿಗೆ ಹೋಗುವಷ್ಟರಲ್ಲಿ ಹೊನ್ನೂರ ಸ್ವಾಮಿ ಅವರ ಪ್ರಾಣಪಕ್ಷಿ ಹಾರಿಹೋಗಿದೆ. ಇದೀಗ ಮದುವೆ ಸಂಭ್ರಮದಲ್ಲಿದ್ದ ಮದುವೆ ಮನೆಯಲ್ಲಿ ಸೂತಕ ಆವರಿಸಿದೆ.