ಆರೋಗ್ಯದ ದೃಷ್ಟಿಯಿಂದ ಮಕ್ಕಳಿಗೆ ಪ್ರತಿದಿನ ಹೆಚ್ಚು ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ನೀಡಬೇಕು: ಡಾ. ವೈ.ಎಲ್. ಶಿವಮೂರ್ತಿ

50
firstsuddi

ಚಿಕ್ಕಮಗಳೂರು: ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅವರಿಗೆ ಹೆಚ್ಚು ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ಪ್ರತಿದಿನ ನೀಡಬೇಕು ಎಂದು ಮಕ್ಕಳ ತಜ್ಞ ಡಾ. ವೈ.ಎಲ್. ಶಿವಮೂರ್ತಿ ಪೋಷಕರಿಗೆ ಸಲಹೆ ಮಾಡಿದರು.

ನಗರದ ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ನಿನ್ನೆ ಏರ್ಪಡಿಸಿದ್ದ ಪೌಷ್ಟಿಕಾಂಶ ದಿನ ಮತ್ತು ದಾನಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪೌಷ್ಟಿಕಾಂಶಯುಕ್ತ ಆಹಾರಗಳು ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗುವುದರ ಜೊತೆಗೆ ಅವರನ್ನು ಸದೃಢರನ್ನಾಗಿ, ಆರೋಗ್ಯವಂತರನ್ನಾಗಿ ಮಾಡುತ್ತವೆ ಹಾಗಾಗಿ ಪೋಷಕರು ದೈನಂದಿನ ಬದುಕಿನಲ್ಲಿ ಪೌಷ್ಟಿಕ ಆಹಾರಗಳಿಗೆ ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದರು.

ಪೌಷ್ಟಿಕಾಂಶದ ಕೊರತೆಯಿಂದಾಗಿ ಬಹಳಷ್ಟು ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತವೆ. ಬಡ ರಾಷ್ಟ್ರಗಳಲ್ಲಿ ಮಕ್ಕಳು ಪೌಷ್ಟಿಕಾಂಶಯುಕ್ತ ಆಹಾರವಿಲ್ಲದೆ ಮರಣ ಹೊಂದುತ್ತಿವೆ ಎಂದು ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ಪಿ.ಕೆ. ರಮೇಶ್ ಮಾತನಾಡಿ, ಉತ್ತಮ ಆರೋಗ್ಯಕ್ಕಾಗಿ ಮಕ್ಕಳು ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸುವುದರ ಜೊತೆಗೆ ಪ್ರತಿನಿತ್ಯ ಯೋಗಾಭ್ಯಾಸ ಮಾಡಬೇಕು ಎಂದು ಸಲಹೆ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಂಶುಪಾಲ ಎನ್.ಆರ್. ಪವನ್‍ಕುಮಾರ್, ಪೌಷ್ಟಿಕ ಆಹಾರದ ಕುರಿತು ಮಕ್ಕಳು ಮತ್ತು ಪೋಷಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ಸಂಸ್ಥೆಗೆ ದಾನ ನೀಡಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷೆ ಎಸ್. ಶಾಂತಕುಮಾರಿ, ಮಕ್ಕಳು ಈ ದೇಶದ ಆಸ್ತಿ, ರಾಷ್ಟ್ರದ ಭದ್ರ ಬುನಾದಿ, ಅವರು ಆರೋಗ್ಯವಂತರಾಗಿದ್ದರೆ ಸ್ವಾಸ್ತ್ಯ ಸಮಾಜದ ನಿರ್ಮಾಣವಾಗುತ್ತದೆ ಎಂದರು.

ಸಂಜೀವಿನಿ ವಿದ್ಯಾಸಂಸ್ಥೆಯ ಬೆಳವಣಿಗೆಗೆ ದಾನ ನೀಡಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ಅವರು, ದಾನಿಗಳು ಮುಂದೆ ಬಂದಲ್ಲಿ ಮಾತ್ರ ವಿದ್ಯಾಸಂಸ್ಥೆಗಳು ಅಭಿವೃದ್ದಿ ಹೊಂದುತ್ತವೆ ಎಂದರು.

ದಾನಿಗಳಾದ ಎ.ಎಸ್. ಸೌಮ್ಯ, ಆರ್.ಡಿ. ಸುನಿಲ್ ಕುಮಾರ್, ಕಾವ್ಯಶ್ರೀ ಮತ್ತು ಶಿವರಾಂ ದಂಪತಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸಂಸ್ಥೆಯ ಖಜಾಂಚಿ ಎಂ.ಪಿ. ಉಡುಪ, ಸದಸ್ಯರಾದ ಗೋಪಿನಾಥ್, ನಾರಾಯಣ ಮಲ್ಯ, ಪ್ರವೀಣ್ ಖಾಂಡ್ಯ ಉಪಸ್ಥಿತರಿದ್ದರು.