ಕೊಲಂಬೊ : ದೇಶದ ಆರ್ಥಿಕ ಬಿಕ್ಕಟ್ಟಿನ ನಡುವೆ ಪ್ರಧಾನಮಂತ್ರಿ ಮಹಿಂದಾ ರಾಜಪಕ್ಸ ಅವರನ್ನು ಹೊರತುಪಡಿಸಿ ಸಂಪುಟದ ಎಲ್ಲಾ ಸಚಿವರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದವರಲ್ಲಿ ರಾಜಪಕ್ಸ ಅವರ ಪುತ್ರ ನಮಲ್ ರಾಜಪಕ್ಸ ಕೂಡ ಸೇರಿದ್ದಾರೆ.
ನಿನ್ನೆ ತಡರಾತ್ರಿ ನಡೆದ ಸಭೆಯಲ್ಲಿ ಎಲ್ಲಾ ಸಚಿವರು ತಮ್ಮ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆಂದು ತಿಳಿದುಬಂದಿದೆ. ರಾಜಪಕ್ಸ ಅವರ ಪುತ್ರ ನಮಲ್ ರಾಜಪಕ್ಸ ಅವರು ಕ್ರೀಡಾ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.
ರಾಜೀನಾಮೆ ನೀಡಿದ ಬಳಿಕ ಟ್ವೀಟ್ ಮಾಡಿದ ನಮಲ್ ರಾಜಪಕ್ಸ ಅವರು, ಎಲ್ಲ ಖಾತೆಗಳಿಗೆ ನನ್ನ ರಾಜೀನಾಮೆಯನ್ನು ತಕ್ಷಣವೇ ಜಾರಿಗೆ ಬರುವಂತೆ ಅಧ್ಯಕ್ಷರಿಗೆ ತಿಳಿಸಿದ್ದೇನೆಂದು ಹೇಳಿದ್ದಾರೆ.
ಸದ್ಯಕ್ಕೆ ಶ್ರೀಲಂಕಾದಲ್ಲಿ ಅರಾಜಕತೆ ತಲೆದೋರಿದೆ. ಕಳೆದೊಂದು ವಾರದಿಂದ ವಿದ್ಯುತ್ ಕಡಿತದ ಜೊತೆಗೆ ಆಹಾರ, ಇಂಧನ ಮತ್ತು ಇತರ ಅಗತ್ಯ ವಸ್ತುಗಳ ತೀವ್ರ ಕೊರತೆಯನ್ನು ಎದುರಿಸುತ್ತಿದೆ.










