ಆಶ್ರಮದಿಂದ ಹೊರಡುವ ಮುನ್ನ ಚಂದ್ರುಗೆ ಹುಷಾರಾಗಿ ಹೋಗಿ ಎಂದಿದ್ದ ವಿನಯ್ ಗುರೂಜಿ.

128
firstsuddi

ಚಿಕ್ಕಮಗಳೂರು : ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರಶೇಖರ್ ನಾಪತ್ತೆಯಾಗುವ ಮೊದಲು ಕೊಪ್ಪ ತಾಲೂಕಿನ ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿ ಆಶ್ರಮಕ್ಕೆ ಬಂದಿದ್ದರು. ವಿನಯ್ ಗುರೂಜಿ ಅವರನ್ನು ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದ್ದರು.

ಈ ಬಗ್ಗೆ ಆಶ್ರಮದ ಸಿಬ್ಬಂದಿ ಸುಧಾಕರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಚಂದ್ರುವಿಗೆ ವಿನಯ್ ಗುರೂಜಿ ಈ ಹೊತ್ತಿನಲ್ಲಿ ಯಾಕೋ ಬಂದಿದ್ದೀಯಾ ಎಂದು ಪ್ರಶ್ನೆ ಮಾಡಿದ್ದರು. ಸುಮಾರು ಅರ್ಧ ಗಂಟೆಗಳ ಕಾಲ ಆಶ್ರಮದಲ್ಲಿದ್ದ ಚಂದ್ರು ಹಾಗೂ ಕಿರಣ್ ಗೆ ಟೈಂ ಆಗಿದೆ ಹುಷಾರಾಗಿ ಹೋಗಿ ಎಂದಿದ್ದರು.

ಆಶ್ರಮಕ್ಕೆ ನಿತ್ಯ ಸಾವಿರಾರು ಜನ ಬರುತ್ತಾರೆ. ನಾವು ಯಾರನ್ನೂ ವಿ.ಐ.ಪಿ. ಎಂದು ಪರಿಗಣಿಸಲ್ಲ. ಚಂದ್ರು ಕೂಡ ಕಿರಣ್ ಜೊತೆ ಬಂದಿದ್ದರು, ಬರುತ್ತಿದ್ದರು. ಅವರ ಸರಳತೆ ನೋಡಿ ಇಂದು ನಮಗೆ ತುಂಬಾ ಬೇಜಾರಾಗಿದೆ. ನಿನ್ನೆಯಿಂದ ಗುರುಗಳು ತುಂಬಾ ಬೇಜಾರಾಗಿದ್ದಾರೆ. ಆಶ್ರಮದಲ್ಲಿ ಚಂದ್ರು ಊಟ ಬಡಿಸುತ್ತಿದ್ದ, ತೆಂಗಿನಕಾಯಿ ಸುಲಿಯುತ್ತಿದ್ದ. ಆದರೆ ಇಂದು ಚಂದ್ರು ಸಾವು ನಮಗೆ ತುಂಬಾ ನೋವು ತಂದಿದೆ ಎಂದು ಹೇಳಿದ್ದಾರೆ.

ತನ್ನ ಸ್ನೇಹಿತ ಕಿರಣ್ ನೊಂದಿಗೆ ಚಂದ್ರಶೇಖರ್ ಅವರು ಅ.30ರ ಭಾನುವಾರ ರಾತ್ರಿ 9.45ಕ್ಕೆ ಗೌರಿಗದ್ದೆ ಆಶ್ರಮಕ್ಕೆ ಬಂದು ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದಾರೆ. ರಾತ್ರಿ 10 ಗಂಟೆಯ ವೇಳೆಯಲ್ಲಿ ಚಂದ್ರಶೇಖರ್ ಅವರಿದ್ದ ಕಾರು ಕೊಪ್ಪ ಬಸ್ ನಿಲ್ದಾಣದಿಂದ ದಾಟಿ ಹೋಗಿರುವ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.