ಕೊಟ್ಟಿಗೆಹಾರ: ಆಸ್ತಿ ಮಾರಾಟದಿಂದ ಬಂದ ಹಣದ ವಿಚಾರವಾಗಿ ನಡೆದ ಮನಸ್ತಾಪ ಇಬ್ಬರ ಕೊಲೆಯಲ್ಲಿ ಅಂತ್ಯವಾದ ಘಟನೆ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಧುಗುಂಡಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಮಧುಗುಂಡಿ ಗ್ರಾಮದ ವಾಸಿ ಸಂತೋಷ್ ಎಂಬಾತ ಆಸ್ತಿ ಮಾರಾಟ ಮಾಡಿದ ಹಣದ ವಿಚಾರದಲ್ಲಿ ಮಾತುಕತೆಗೆ ಬಂದಿದ್ದ ಅದೇ ಗ್ರಾಮದ ಕಾರ್ತಿಕ್ (45) ನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದು ಬಿಡಿಸಲು ಮಧ್ಯೆ ಪ್ರವೇಶಿಸಿದ ತನ್ನ ತಂದೆ ತಾಯಿಯ ಮೇಲೆಯೂ ಸಂತೋಷ್ ಮಚ್ಚು ಬೀಸಿದ್ದು, ಗಂಭೀರ ಗಾಯಗೊಂಡಿದ್ದ ತಂದೆ ಭಾಸ್ಕರಗೌಡ (70) ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ತಾಯಿ ಪ್ರೇಮ (52) ಅವರ ಸ್ಥಿತಿಯೂ ಗಂಭೀರವಾಗಿದೆ. ಕೃತ್ಯದ ಬಳಿಕ ಆರೋಪಿ ಸಂತೋಷ್ ಬಾಳೂರು ಪೊಲೀಸ್ ಠಾಣೆಗೆ ತಾನಾಗಿಯೇ ಬಂದು ಶರಣಾಗಿದ್ದಾನೆ.
ಘಟನೆಯ ವಿವರ:
ಮೃತ ಕಾರ್ತಿಕ್ ಅವರು, ಭಾಸ್ಕರ್ ಗೌಡ ರವರ ಜಮೀನನ್ನು ಬೆಂಗಳೂರು ಮೂಲದ ಉದ್ಯಮಿಗೆ ಮಾರಾಟ ಮಾಡಲು ಮಧ್ಯವರ್ತಿಯಾಗಿದ್ದರು ಎನ್ನಲಾಗಿದೆ. ಜಮೀನಿನ ವ್ಯಾಪಾರದ ಮುಂಗಡವಾಗಿ ಭಾಸ್ಕರಗೌಡರ ಕುಟುಂಬಕ್ಕೆ 12 ಲಕ್ಷ ಹಣ ಕೊಡಿಸಿದ್ದು, ಆ ಹಣವನ್ನು ಭಾಸ್ಕರ್ ಗೌಡ ರವರ ಮೊದಲ ಮಗ ಶಿವು ಕುಮಾರ್ ರವರು ತೆಗೆದುಕೊಂಡು ಹೋಗಿದ್ದು ಈ ವಿಚಾರದಲ್ಲಿ ಮನಸ್ತಾಪಗೊಂಡಿದ್ದ ಎರಡನೇ ಮಗ ಸಂತೋಷ್, ಕಾರ್ತಿಕ್ ನನ್ನು ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಭಾನುವಾರ ರಾತ್ರಿ ತನ್ನ ಮನೆಗೆ ಬಂದಿದ್ದ ಕಾರ್ತಿಕ್ ಅವರೊಂದಿಗೆ ಹಣಕಾಸಿನ ವಿಚಾರವಾಗಿ ಮಾತಿಗೆ ಮಾತು ಬೆಳೆಸಿದ ಸಂತೋಷ್ ಏಕಾಏಕಿ ಮನೆಯೊಳಗಿನಿಂದ ಮಚ್ಚು ತಂದು ಕಾರ್ತಿಕ್ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಕಾರ್ತಿಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರ್ತಿಕ್ ಮಧುಗುಂಡಿ ಗ್ರಾಮದ ಉಪೇಂದ್ರಗೌಡ ಎಂಬುವವರ ಪುತ್ರ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ , ಡಿವೈಎಸ್‍ಪಿ ಪುರುಷೋತ್ತಮ್, ವೃತ್ತ ನಿರೀಕ್ಷಕ ಸೋಮೇಗೌಡ, ಪಿಎಸ್‍ಐ ಶ್ರೀನಾಥ್ ರೆಡ್ಡಿ, ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.










