ಬೆಂಗಳೂರು: ವಂಚನೆಯನ್ನು ತೆಗೆದುಹಾಕಲು ಹಾಗೂ ವಾರ್ಷಿಕ ತೆರಿಗೆ ಸಂಗ್ರಹಣೆಯನ್ನು ಸುಧಾರಿಸಲು ಸುಮಾರು 22 ಲಕ್ಷ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದೀಗ ಖಾತಾಗಳನ್ನು ನೀಡದ 5 ಲಕ್ಷ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಸಿದ್ಥತೆ ನಡೆಸಿದೆ. ಬಿಬಿಎಂಪಿ ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ಅವರು, ಇ-ಖಾತಾ ಪಡೆಯುವವರಿಗೆ ಪಾಲಿಕೆಯು ಶೀಘ್ರದಲ್ಲೇ ಹೊಸ ಪೋರ್ಟಲ್ ಅನ್ನು ಪ್ರಾರಂಭಿಸಲಿದೆ, ಇದರಿಂದ ಯಾವುದೇ ರೀತಿಯ ಖಾತಾ ಹೊಂದಿಲ್ಲದ ಆಸ್ತಿ ಮಾಲೀಕರಿಗೆ ಹೊಸ ಇ-ಖಾತಾವನ್ನು ಪಡೆಯಲು ಅನುಕೂಲವಾಗಲಿದೆ ಎಂದು ಹೇಳಿದರು.
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಆಸ್ತಿ ಮಾಲೀಕರು ನವೆಂಬರ್ 30 ರೊಳಗೆ ಬಾಕಿ ತೆರಿಗೆ ಪಾವತಿಸಿದರೆ ದಂಡ ಮತ್ತು ಬಡ್ಡಿ ಮನ್ನಾ ಆಗಲಿದೆ. ಒಂದು ವೇಳೆ ಬಾಕಿ ತೆರಿಗೆ ಪಾವತಿಸದಿದ್ದರೆ ಡಿಸೆಂಬರ್ 1 ರಿಂದ ಬಾಕಿ ತೆರಿಗೆ ಜೊತೆಗೆ ದುಬಾರಿ ದಂಡ ಮತ್ತು ಬಡ್ಡಿ ವಸೂಲಿ ಮಾಡಲಾಗುವುದು. ವಸತಿಯೇತರ ಆಸ್ತಿಗಳಿಗೆ ಬೀಗ ಮುದ್ರ ಹಾಕಲಾಗುವುದು. ಖಾತಾ ಹೊಂದಿಲ್ಲದ ಆಸ್ತಿಗಳ ಮಾಲೀಕರು ಈಗಲೇ ಎಚ್ಚೆತ್ತುಕೊಂಡು ತೆರಿಗೆ ಪಾವತಿಸಬೇಕು. ಇಲ್ಲದಿದ್ದರೆ ದುಬಾರಿ ಮೊತ್ತ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.










