ಬೆಂಗಳೂರು: ಇಂದಿನಿಂದ ಡಿಸೆಂಬರ್ 19ರ ವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳ ನಡುವೆ ಜಿದ್ದಾಜಿದ್ದಿಗೆ ವೇದಿಕೆಯಾಗಲಿರುವ ಈ ಅಧಿವೇಶನಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ. ಪ್ರತಿಪಕ್ಷಗಳು ವಕ್ಫ್ ವಿವಾದ, ಮುಡಾ ಹಗರಣ, ಬಳ್ಳಾರಿ ಬಾಣಂತಿಯರ ಸಾವು, ಅಬಕಾರಿ ಅಕ್ರಮ ಆರೋಪದೊಂದಿಗೆ ಸರ್ಕಾರದ ವಿರುದ್ಧ ಮುಗಿಬೀಳಲು ಸಿದ್ಧವಾಗಿದ್ದರೆ, ಇತ್ತ ಆಡಳಿತಾರೂಢ ಕಾಂಗ್ರೆಸ್ ಕೌಂಟರ್ ಕೊಡಲು ತಯಾರಾಗಿದೆ. ವಕ್ಫ್ ವಂಚನೆ ಪ್ರಕರಣವನ್ನು ಮುಂದಿಟ್ಟು ಬಿಜೆಪಿಯು ಕಾಂಗ್ರೆಸ್ ಸರ್ಕಾರದ ಮೇಲೆ ಮುಗಿಬೀಳಲು ಸಿದ್ಧವಾಗಿದೆ. ವಕ್ಫ್ ನೋಟಿಸ್ ಹಾಗೂ ಪಹಣಿಯಲ್ಲಿ ವಕ್ಫ್ ಹೆಸರು ನೋಂದಣಿ ವಿಚಾರಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಂತ್ರಗಾರಿಕೆ ನಡೆಸಿದೆ. ಇದರೊಂದಿಗೆ ಸಚಿವ ಜಮೀರ್ ಅಹಮದ್ ರಾಜೀನಾಮೆಗೂ ಮೈತ್ರಿ ಕೂಟ ಒತ್ತಾಯಿಸಲು ಸಜ್ಜಾಗಿದೆ. ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣಗಳನ್ನು ಮುಂದಿಟ್ಟು ಸರ್ಕಾರದ ಮೇಲೆ ತೀವ್ರ ಟೀಕಾ ಪ್ರಹಾರ ನಡೆಸಲು ದೋಸ್ತಿಗಳು ಸಜ್ಜಾಗಿದ್ದಾರೆ. ಬಳ್ಳಾರಿ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು, ಸರ್ಕಾರದ ವೈಫಲ್ಯ, ನಿರ್ಲಕ್ಷ್ಯದ ಮೂಲಕ ಸಚಿವ ದಿನೇಶ್ ಗುಂಡೂರಾವ್ ರಾಜೀನಾಮೆ ಹಾಗೂ ಪ್ರಕರಣದ ನ್ಯಾಯಾಂಗ ತನಿಖೆಗೆ ಒತ್ತಾಯ ಮಾಡಲು ಪ್ರತಿಪಕ್ಷ ಮುಂದಾಗಿದೆ. ಉಳಿದಂತೆ ಅಬಕಾರಿ ಇಲಾಖೆಯಲ್ಲಿನ ವಸೂಲಿ ಆರೋಪ ಪ್ರಕರಣವನ್ನು ಸದನದಲ್ಲಿ ಪ್ರಸ್ತಾಪಿಸಿ ಅಬಕಾರಿ ಸಚಿವರ ರಾಜೀನಾಮೆಗೆ ಒತ್ತಾಯಿಸಲು ನಿರ್ಧರಿಸಿದೆ. ಮುಡಾ ಸೈಟ್ ಗೋಲ್‍ಮಾಲ್ ಪ್ರಕರಣ, ಇ.ಡಿ. ಲೋಕಾಯಕ್ತಕ್ಕೆ ಬರೆದ ಪತ್ರ, ಹೊಸ ಮುಡಾ ಅಕ್ರಮಗಳು ಬಯಲಾಗುತ್ತಿರುವುದನ್ನು ಉಲ್ಲೇಖಿಸಿ ಸಿಎಂ ಹಾಗೂ ಸರ್ಕಾರದ ವಿರುದ್ಧ ಮುಗಿಬೀಳಲು ಪ್ಲಾನ್ ರೂಪಿಸಿದೆ. ಇವುಗಳೊಂದಿಗೆ ರೇಷನ್ ಕಾರ್ಡ್ ರದ್ದು, ಬ್ರ್ಯಾಂಡ್ ಬೆಂಗಳೂರು, ಅಭಿವೃದ್ಧಿ ಶೂನ್ಯ, ಲಾ ಆ್ಯಂಡ್ ಆರ್ಡರ್, ಭ್ರಷ್ಟಾಚಾರ, ಅನುದಾನ, ಉತ್ತರ ಕರ್ನಾಟಕ ಕಡೆಗಣನೆ, ಅಭಿವೃದ್ಧಿ ಯೋಜನೆಗಳ ಕುಂಠಿತ, ಅನುದಾನ ಸ್ಥಗಿತ ಸೇರಿ ಇನ್ನೂ ಅನೇಕ ಅಸ್ತ್ರಗಳಿಂದ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ದೋಸ್ತಿಗಳು ಸಜ್ಜಾಗಿದ್ದಾರೆ. ಉಭಯ ಸದನಗಳಲ್ಲೂ ಒಗ್ಗಟ್ಟಿನ ಹೋರಾಟದ ಮೂಲಕ ಸರ್ಕಾರದ ಮೇಲೆ ಮುಗಿಬೀಳಲು ನಿರ್ಧರಿಸಿವೆ.










