ತಿರುವನಂತಪುರಂ : ಇಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ತಮ್ಮ ಕ್ಷೇತ್ರ ವಯನಾಡ್ ಗೆ ಭೇಟಿ ನೀಡಲಿದ್ದಾರೆ. ಮೂರು ದಿನಗಳ ಭೇಟಿಯ ವೇಳೆ ರಾಹುಲ್ ಗಾಂಧಿ ಅವರು ತಮ್ಮ ಕ್ಷೇತ್ರದಲ್ಲಿ ಮಾನಂತವಾಡಿಯಲ್ಲಿ ರೈತರ ಬ್ಯಾಂಕ್ ಕಟ್ಟಡ ಉದ್ಘಾಟನೆ ಮತ್ತು ಸುಲ್ತಾನ್ ಬತ್ತೇರಿಯಲ್ಲಿ ಯುಡಿಎಫ್ ಬಹುಜನ ಸಂಗಮ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಕೆ ಸುಧಾಕರನ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಬರಮಾಡಿಕೊಳ್ಳಲಿದ್ದಾರೆ. ಭಾನುವಾರ ಕೋಝಿಕ್ಕೋಡ್ ನಿಂದ ದೆಹಲಿಗೆ ವಾಪಸಾಗಲಿದ್ದಾರೆ.
ಪರಿಸರ ಸೂಕ್ಷ್ಮ ವಲಯ ಸಂಬಂಧ ರಾಹುಲ್ ಗಾಂಧಿ ಮಧ್ಯಪ್ರವೇಶ ಮಾಡುತ್ತಿಲ್ಲ ಎಂದು ಆರೋಪಿಸಿ ಜೂನ್.24(ಶುಕ್ರವಾರ)ರಂದು ಎಸ್ ಎಫ್ ಐ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಈ ವೇಳೆ ಪ್ರತಿಭಟನಾ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ್ದು, ಕೇರಳದ ವಯನಾಡಿನ ಕಲ್ಪೆಟ್ಟಾದಲ್ಲಿರುವ ರಾಹುಲ್ ಗಾಂಧಿ ಅವರ ಸಂಸದರ ಕಚೇರಿಗೆ ನುಗ್ಗಿ ಕಟ್ಟಡದ ಬಾಗಿಲು, ಕಿಟಕಿಗಳನ್ನು ಧ್ವಂಸಗೊಳಿಸಿದ್ದರು.










