ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿಯ `ಮಹಾಕಾಲೇಶ್ವರ ದೇವಾಲಯ’ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೋಕಾರ್ಪಣೆಗೊಳಿಸಲಿದ್ದಾರೆ. ಕಾರಿಡಾರ್ ಗೆ `ಮಹಾಕಾಲ ಲೋಕ’ ಎಂದು ಹೆಸರಿಡಲಾಗಿದೆ.
ಉದ್ಘಾಟನೆಯ ಬಳಿಕ ಅಕ್ಟೋಬರ್ 12 ರಿಂದ ಕಾರಿಡಾರ್ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ. ಪ್ರಧಾನಿ ಮೋದಿ ಇಂದು (ಅ.11) ಸಂಜೆ 5:30ಕ್ಕೆ ಉಜ್ಜಯಿನಿಗೆ ಬಂದಿಳಿಯಲಿದ್ದಾರೆ. ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಕಾರಿಡಾರ್ ಉದ್ಘಾಟನೆ ಮಾಡಲಿದ್ದಾರೆ.
ಏನಿದರ ವಿಶೇಷತೆ?
12 ಜೋತಿರ್ಲಿಂಗ ಕ್ಷೇತ್ರಗಳಲ್ಲಿ ಉಜ್ಜಯಿನಿ ಮಹಾಕಾಲೇಶ್ವರ ದೇಗುಲವೂ ಒಂದು. 856 ಕೋಟಿ ರೂ. ವೆಚ್ಚದಲ್ಲಿ ನವೀಕೃತಗೊಂಡಿದೆ. ದೇಶದಲ್ಲೇ ಅತಿ ಉದ್ದವಾದ 900 ಮೀಟರ್ ಕಾರಿಡಾರ್ ಇದಾಗಿದೆ. ಆಂಬ್ಯುಲೆನ್ಸ್, ಅಗ್ನಿಶಾಮಕ ವಾಹನಗಳ ಸಂಚಾರಕ್ಕೂ ಅವಕಾಶ ಕಲ್ಪಿಸಲಾಗಿದೆ. ಶಿವಪುರಾಣ ಆಧರಿಸಿ ಕಾರಿಡಾರ್ ಪ್ರಾರಂಭದಲ್ಲಿ 2 ಬೃಹತ್ ಹೆಬ್ಬಾಗಿಲು ಇದೆ. ಪ್ರವಾಸಿ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ವಿವಿಧ ಮೂಲ ಸೌಕರ್ಯಗಳನ್ನೂ ಕಲ್ಪಿಸಲಾಗಿದೆ.










