ಜೆರುಸಲೇಂ: ಇಂದು ಬೆಳ್ಳಂಬೆಳಿಗ್ಗೆ ಇರಾನ್‍ಗೆ ಇಸ್ರೇಲ್ ಸೇನಾ ಪಡೆಗಳು ದೊಡ್ಡ ಶಾಕ್ ನೀಡಿವೆ. ಈ ಹಿಂದೆ ತನ್ನ ಮೇಲಿನ ದಾಳಿಗೆ ಪ್ರತಿಕಾರವಾಗಿ ಇರಾನ್‍ನ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವುದಾಗಿ ಇಸ್ರೇಲ್ ತಿಳಿಸಿದೆ. ಇದೇ ವರ್ಷ ಅಕ್ಟೋಬರ್ 1 ರಂದು ಇಸ್ರೇಲ್ ಮೇಲೆ ಇರಾನ್ ಖಂಡಾಂತರ ಕ್ಷಿಪಣಿಗಳ ಸುರಿಮಳೆಗರೆದಿತ್ತು. ಸುಮಾರು 200 ಕ್ಷಿಪಣಿಗಳನ್ನು ಅದು ಉಡಾಯಿಸಿತ್ತು. ಕಳೆದ ಆರು ತಿಂಗಳಲ್ಲಿ ಇಸ್ರೇಲ್ ಮೇಲೆ ಇರಾನ್ ನಡೆಸಿದ ಎರಡನೇ ನೇರ ದಾಳಿ ಇದಾಗಿತ್ತು. ಇದಕ್ಕೆ ಇಸ್ರೇಲ್ ಪ್ರತಿಕಾರ ತೀರಿಸಿಕೊಳ್ಳುವುದು ನಿರೀಕ್ಷಿತವಾಗಿತ್ತು.
ಇರಾನ್‍ನ ಅನೇಕ ಸ್ಥಳಗಳಲ್ಲಿನ ಮಿಲಿಟರಿ ನೆಲೆಗಳ ಮೇಲೆ ನಿಖರ ಹಾಗೂ ನಿರ್ದಿಷ್ಟ ದಾಳಿಗಳನ್ನು ಐಡಿಎಫ್ ಪೂರ್ಣಗೊಳಿಸಿದೆ ಎಂದು ಇಸ್ರೇಲ್ ಹೇಳಿಕೆ ನೀಡಿದೆ. “ನಮ್ಮ ಯುದ್ಧ ವಿಮಾನಗಳು ತಾಯ್ನಾಡಿಗೆ ಮರಳಿವೆ. ಇತ್ತೀಚಿನ ತಿಂಗಳಲ್ಲಿ ಇಸ್ರೇಲ್ ದೇಶ ಹಾಗೂ ನಾಗರಿಕರ ವಿರುದ್ಧದ ಇರಾನಿಯನ್ ಆಡಳಿತದ ದಾಳಿಗಳಿಗೆ ಪ್ರತಿಯಾಗಿ ಈ ದಾಳಿ ನಡೆಸಲಾಗಿದೆ. ಪ್ರತೀಕಾರದ ದಾಳಿಯು ಪೂರ್ಣಗೊಂಡಿದ್ದು, ಯೋಜನೆ ಫಲಪ್ರದಗೊಂಡಿದೆ” ಎಂದು ಇಸ್ರೇಲ್ ತಿಳಿಸಿದೆ. ಗುಪ್ತಚರ ಮಾಹಿತಿ ಆಧಾರದಲ್ಲಿ ಐಎಎಫ್ ಯುದ್ಧ ವಿಮಾನವು, ಕಳೆದ ವರ್ಷ ಇಸ್ರೇಲ್ ಮೇಲೆ ಇರಾನ್ ಉಡಾಯಿಸಿದ ಕ್ಷಿಪಣಿಗಳನ್ನು ತಯಾರಿಸುವ ಕ್ಷಿಪಣಿ ಉತ್ಪಾದನಾ ಘಟಕಕ್ಕೆ ಕ್ಷಿಪಣಿಗಳಿಂದ ದಾಳಿ ನಡೆಸಿದೆ. ಈ ಕ್ಷಿಪಣಿಗಳು ಇಸ್ರೇಲ್ ದೇಶದ ನಾಗರಿಕರಿಗೆ ನೇರ ಹಾಗೂ ತಕ್ಷಣದ ಬೆದರಿಕೆಯಾಗಿದ್ದವು. ಇದೇ ಸಮಯಕ್ಕೆ, ಇರಾನ್‍ನಲ್ಲಿ ಇಸ್ರೇಲ್‍ನ ವೈಮಾನಿಕ ಸ್ವಾತಂತ್ರ್ಯ ನಿಬರ್ಂಧಿಸುವ ಉದ್ದೇಶ ಹೊಂದಿದ್ದ ಮೇಲ್ಮೈನಿಂದ ವಾಯು ಕ್ಷಿಪಣಿ ವ್ಯವಸ್ಥೆ ಹಾಗೂ ಇರಾನ್‍ನ ಹೆಚ್ಚುವರಿ ವೈಮಾನಿಕ ಸಾಮಥ್ರ್ಯಗಳನ್ನು ಐಡಿಎಫ್ ಹೊಡೆದುರುಳಿಸಿದೆ” ಎಂದು ಹೇಳಿಕೆ ನೀಡಿದೆ. ಇಸ್ರೇಲ್ ನೆಲದ ಮೇಲಿನ ಕ್ಷಿಪಣಿ ದಾಳಿಗಳು ಸೇರಿದಂತೆ ಟೆಹರಾನ್ ಮತ್ತು ಅದರ ಮಿತ್ರ ಬಣಗಳ ಆಕ್ರಮಣಕ್ಕೆ ಪ್ರತಿಕ್ರಿಯೆ ನೀಡುವುದು ತನ್ನ ಹಕ್ಕು ಮತ್ತು ಕರ್ತವ್ಯ ಎಂದು ಇಸ್ರೇಲ್ ಪ್ರತಿಪಾದಿಸಿದೆ.










