ಕೇಪ್‌ಟೌನ್: ದಕ್ಷಿಣ ಆಫ್ರಿಕಾದ ಲಿಂಪೊಪೊ ಪ್ರಾಂತ್ಯದಲ್ಲಿ ಈಸ್ಟರ್ ಸಮ್ಮೇಳನಕ್ಕೆ ತೆರಳುತ್ತಿದ್ದ ಬಸ್ ಸೇತುವೆ ಮೇಲಿನಿಂದ ಬಿದ್ದ ಪರಿಣಾಮ ಕನಿಷ್ಠ 45 ಜನರು ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಬದುಕುಳಿದ 8 ವರ್ಷದ ಮಗು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೊಕೊಪಾನೆ ಮತ್ತು ಮಾರ್ಕೆನ್ ನಡುವಿನ ಮಮತ್ಲಕಲಾ ಪರ್ವತದ ಹಾದಿಯಲ್ಲಿ ಅಪಘಾತ ಸಂಭವಿಸಿದೆ. ಬಸ್ ಬಿದ್ದ ನಂತರ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಸಲಾಗಿದೆ. ಈ ಘಟನೆ ಸಂಬಂಧ ತನಿಖೆ ನಡೆಯುತ್ತಿದೆ.
ಬೆಂಕಿಯಲ್ಲಿ ಅನೇಕ ದೇಹಗಳು ಗುರುತಿಸಲಾಗದಷ್ಟು ಸುಟ್ಟು ಹೋಗಿದ್ದವು. ಕೆಲವು ಮೃತದೇಹಗಳು ವಾಹನದೊಳಗೆ ಸಿಲುಕಿಕೊಂಡಿದ್ದವು. ಈ ಬಸ್ ನೆರೆ ದೇಶ ಬೋಟ್ಸ್ವಾನಾದಿಂದ ಈಸ್ಟರ್ ತೀರ್ಥಯಾತ್ರೆಯನ್ನು ಆಯೋಜಿಸಲಾದ ಜನಪ್ರಿಯ ಮೋರಿಯಾ ಪಟ್ಟಣಕ್ಕೆ ಪ್ರಯಾಣಿಸುತ್ತಿತ್ತು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.










