ಬೆಳ್ತಂಗಡಿ: ಉಜಿರೆಯಲ್ಲಿ ಬಾಲಕನ ಕಿಡ್ನಾಪ್ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದ್ದು, ಪೊಲೀಸರು ಮಗುವನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಲಾರದಲ್ಲಿ ಮಗುವನ್ನು ಪತ್ತೆ ಹಚ್ಚಿ 6 ಜನ ಅಪಹರಣಕಾರರನ್ನು ಬಂಧಿಸಿರುವ ಪೊಲೀಸರು, ಅಪಹರಣವಾದ 48 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿದ್ದಾರೆ. ಉಜಿರೆ ರಥಬೀದಿಯ ಬಿಜೋಯ್ ಅವರ ಮಗ ಅನುಭವ್ (8) ಮನೆಯಂಗಳದಲ್ಲಿ ಆಡುತ್ತಿದ್ದಾಗಲೇ ಎರಡು ದಿನಗಳ ಹಿಂದೆ ಅಪಹರಣಕಾರರು ಅಪಹರಿಸಿದ್ದರು. ಉಭಯ ಜಿಲ್ಲೆಗಳಲ್ಲಿ ಈ ಪ್ರಕರಣ ಸಾಕಷ್ಟು ಆತಂಕ ಸೃಷ್ಟಿಸಿತ್ತು.
ಕೋಲಾರದ ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಹರಣಕಾರರನ್ನು ಮಗುವಿನೊಂದಿಗೆ ವಿಶೇಷ ತಂಡ ಪೊಲೀಸರು ಶನಿವಾರ ಬೆಳಗ್ಗೆ 5 ರ ಹೊತ್ತಿಗೆ ಪತ್ತೆ ಹಚ್ಚಿದರು. ಕೂಡಲೇ ಅಪಹರಣಕಾರರನ್ನು ಕೋಲಾರ ಪೊಲೀಸ್ ಠಾಣೆಗೆ ಕರೆತರಲಾಯಿತು.
ಅಪರಾಹ್ನ 11 ರ ವೇಳೆಗೆ ಕೋಲಾರ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿ, ನಂತರ ಬೆಳ್ತಂಗಡಿ ನ್ಯಾಯಾಲಯಕ್ಕೆ ಕರೆತರಲಾಗುತ್ತದೆ ಎನ್ನಲಾಗಿದ್ದು, ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಉಪನಿರೀಕ್ಷಕ ಬಂದಕುಮಾರ್, ಧರ್ಮಸ್ಥಳ ಠಾಣೆ ಉಪನಿರೀಕ್ಷಕ ಪವನ್ ಕುಮಾರ್ ನೇತೃತ್ವದ ವಿಶೇಷ ತಂಡ ಹಾಜರು ಪಡಿಸುವ ಸಾಧ್ಯತೆ ಇದೆ.










