ಉತ್ತರಪ್ರದೇಶ ವಿಧಾನಸಭೆ ಚುನಾವಣೆ – ಮೊದಲ ಹಂತದ ಮತದಾನ ಆರಂಭ…

70
firstsuddi

ಲಕ್ನೋ : ದೇಶದಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು ನಡೆಯುತ್ತಿದ್ದು 11 ಜಿಲ್ಲೆಗಳ 58 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.

58 ಕ್ಷೇತ್ರಗಳಲ್ಲಿ 623 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು, 2.27 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮತದಾನ ಪ್ರಕ್ರಿಯೆ ಬೆಳಿಗ್ಗೆ 6.30ಕ್ಕೆ ಆರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ. ಮೊದಲ ಹಂತದಲ್ಲಿ ಸಚಿವರಾದ ಸುರೇಶ್ ರಾಣಾ, ಶ್ರೀಕಾಂತ್ ಶರ್ಮಾ, ಸಂದೀಪ್ ಸಿಂಗ್, ಕಪಿಲ್ ದೇವ್ ಅಗರ್ವಾಲ್, ಅತುಲ್ ಗಾರ್ಗ್ ಮತ್ತು ಚೌಧುರಿ ಲಕ್ಷ್ಮಿ ನಾರಾಯಣ್ ಸೇರಿದಂತೆ ಹಲವು ನಾಯಕರ ಭವಿಷ್ಯ ನಿರ್ಧಾರವಾಗಲಿದೆ.

58 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಬೆಳಗ್ಗೆ 9ಗಂಟೆ ಹೊತ್ತಿಗೆ ಒಟ್ಟಾರೆ ಶೇ.7.93ರಷ್ಟು ಮತಚಲಾವಣೆಯಾಗಿದೆ. ಅದರಲ್ಲಿ ಆಗ್ರಾದಲ್ಲಿ ಶೇ.8.1, ಮಥುರಾದಲ್ಲಿ ಶೇ.8.4, ಅಲಿಗಢ್-ಶೇ.8.39, ಮೀರತ್ ಶೇ. 9, ಹಾಪುರದಲ್ಲಿ ಶೇ.8.16, ಬುಲಂದ್ಶಹರ್ ಶೇ.7.34, ಗೌತಮ ಬುದ್ಧನಗರ ಶೇ.8.33, ಮುಜಾಫರ್ನಗರ ಶೇ.7.5 ಮತ್ತು ಶಾಮ್ಲಿಯಲ್ಲಿ ಶೇ.7.7ರಷ್ಟು ಮತದಾನ ಆಗಿದೆ.

ಈ ಭಾಗದ ಹಲವು ಕ್ಷೇತ್ರಗಳು ಜಾಟ್ ಸಮುದಾಯದ ಪ್ರಾಬಲ್ಯ ಇರುವ ಸ್ಥಳಗಳು. ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಗಳನ್ನು ತೀವ್ರವಾಗಿ ಖಂಡಿಸಿ, ಹೋರಾಟದ ಮಾಡಿದವರೇ ಈ ಭಾಗದಲ್ಲಿ ಹೆಚ್ಚಿನ ಜನರು ಇದ್ದಾರೆ. ಒಟ್ಟಾರೆ 403 ಕ್ಷೇತ್ರಗಳಿಗೆ ಏಳು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.