ಡೆಹ್ರಾಡೂನ್ : ಉತ್ತರಾಖಂಡ ವಿಧಾನಸಭೆಯ ಸ್ಪೀಕರ್ ಆಗಿ ರಿತು ಖಂಡೂರಿ ಭೂಷಣ್ ಅವರು ಆಯ್ಕೆಯಾಗಿದ್ದಾರೆ. ಈ ಮೂಲಕ ಉತ್ತರಾಖಂಡ ಇತಿಹಾಸದಲ್ಲಿಯೇ ಮೊದಲ ಮಹಿಳಾ ಸ್ಪೀಕರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರಿತು ಖಂಡೂರಿ ಅವರು 2017ರಲ್ಲಿ ಮೊದಲ ಬಾರಿಗೆ ಯಮಕೇಶ್ವರ ಕ್ಷೇತ್ರದಿಂದ ಆಯ್ಕೆ ಆಗಿದ್ದರು. ಈ ಹಿಂದೆ ರಿತು ಉತ್ತರಾಖಂಡ್ ನ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷರಾಗಿದ್ದರು. ಈ ಬಾರಿ ಕೋಟ್ ದ್ವಾರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರಿತು ಖಂಡೂರಿ ಕಾಂಗ್ರೆಸ್ ನ ಸುರೇಂದ್ರ ಸಿಂಗ್ ನೇಗಿಯವರ ವಿರುದ್ಧ ಸುಮಾರು 3,687 ಮತಗಳ ಅಂತರದಿಂದ ಗೆದ್ದಿದ್ದರು.
ಉತ್ತರಾಖಂಡ ವಿಧಾನಸಭೆ ಸ್ಪೀಕರ್ ಆಗಿ ಆಯ್ಕೆಯಾಗುತ್ತಿದ್ದಂತೆ ಟ್ವೀಟ್ ಮಾಡಿರುವ ರಿತು, ಬಿಜೆಪಿ ಸದಸ್ಯರು ಮತ್ತು ಪ್ರತಿಪಕ್ಷಗಳ ನಾಯಕರಿಗೆ ನನ್ನ ಧನ್ಯವಾದಗಳು. ಸಂಸದೀಯ ಸಂಪ್ರದಾಯ ಮತ್ತು ಪರಿಕಲ್ಪನೆಗಳನ್ನು ಪೂರೈಸಲು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.










