ಉದ್ಘಾಟನೆ ವೇಳೆಯೇ ಕುಸಿದು ಬಿತ್ತು ಸೇತುವೆ – ವಿಡಿಯೋ ವೈರಲ್…

73
firstsuddi

ಕಿನ್ಶಾಸಾ : ಉದ್ಘಾಟನೆ ವೇಳೆಯೇ ಸೇತುವೆಯೊಂದು ದಿಢೀರ್ ಕುಸಿದು ಬಿದ್ದಿರುವ ಘಟನೆ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ದೇಶದಲ್ಲಿ ನಡೆದಿದೆ.

ಘಟನೆಯ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದ್ದು, ವಿಡಿಯೋ ನೋಡಿದ ಪ್ರತಿಯೊಬ್ಬರೂ ಕೂಡ ಸೇತುವೆ ನಿರ್ಮಾಣದ ಕಾಮಗಾರಿಯ ಗುಣಮಟ್ಟವನ್ನು ಅಪಹಾಸ್ಯ ಮಾಡುತ್ತಿದ್ದಾರೆ.

ಮಳೆಗಾಲದಲ್ಲಿ ಸ್ಥಳೀಯರು ನದಿ ದಾಟಲು ಈ ಕಿರು ಸೇತುವೆಯನ್ನು ನಿರ್ಮಿಸಲಾಗಿತ್ತು. ವೈರಲ್ ಆಗಿರುವ ವೀಡಿಯೋದಲ್ಲಿ ಸೇತುವೆಯನ್ನು ಉದ್ಘಾಟಿಸಲು ಅಧಿಕಾರಿಗಳು ಸೇತುವೆ ಮೇಲೆ ನಿಂತಿರುವುದು ಕಾಣಿಸುತ್ತದೆ. ಸೇತುವೆಯ ಒಂದು ತುದಿಯಲ್ಲಿ ಕೆಂಪು ರಿಬ್ಬನ್ ಕಟ್ಟಲಾಗಿತ್ತು. ಅದನ್ನು ಮಹಿಳಾ ಅಧಿಕಾರಿಯೊಬ್ಬರು ಕತ್ತರಿಸಿದ್ದಾರೆ. ಆದರೆ ರಿಬ್ಬನ್ ಗೆ ಕತ್ತರಿ ತಾಗುತ್ತಲೇ ಸೇತುವೆ ಕುಸಿಯಲಾರಂಭಿಸಿದೆ.

ತಕ್ಷಣ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಹಿಳಾ ಅಧಿಕಾರಿಯನ್ನು ಕುಸಿಯುತ್ತಿದ್ದ ಸೇತುವೆಯಿಂದ ರಕ್ಷಿಸಿದ್ದಾರೆ. ಸದ್ಯ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಆದರೆ ಸೇತುವೆ ಎರಡು ಹೋಳಾಗಿ ಬಿದ್ದಿದೆ.