ಎಂಟು ಬಾರಿ ದಸರಾ ಅಂಬಾರಿ ಹೊತ್ತಿದ್ದ ಅರ್ಜುನ, ಕಾಡಾನೆ ದಾಳಿಗೆ ಬಲಿ…

54
firstsuddi

ಹಾಸನ: ಹಾಸನ ಜಿಲ್ಲೆಯ ಹಲವೆಡೆ ಕಾಡಾನೆ ದಾಳಿ ಪ್ರಕರಣಗಳು ಹೆಚ್ಚಾಗಿದ್ದು, ಅವುಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಕಾರ್ಯಾಚರಣೆ ವೇಳೆ ಒಂಟಿ ಸಲಗವೊಂದರ ದಾಳಿಗೆ ಎಂಟು ಬಾರಿ ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಮೃತಪಟ್ಟ ಘಟನೆ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ನಡೆದಿದೆ.

ನಾಲ್ಕು ಸಾಕಾನೆಗಳೊಂದಿಗೆ ಇಂದು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರು ಕಾರ್ಯಾಚರಣೆ ಆರಂಭಿಸಿದ್ದರು. ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ವೇಳೆ ಅರ್ಜುನನ ಮೇಲೆ ಒಂಟಿಸಲಗ ಅಟ್ಯಾಕ್ ಮಾಡಿದೆ. ಒಂಟಿಸಲಗ ದಾಳಿ ಮಾಡುತ್ತಿದ್ದಂತೆ ಉಳಿದ ಮೂರು ಸಾಕಾನೆಗಳು ಓಡಿ ಹೋಗಿದೆ.

ಸಾಕಾನೆ ಅರ್ಜುನ ಒಂಟಿಸಲಗದ ಜೊತೆ ಕಾಳಗಕ್ಕಿಳಿದಿದೆ. ಮದಗಜಗಳ ಕಾಳಗದಲ್ಲಿ ಅರ್ಜುನ ಸಾವನ್ನಪ್ಪಿದೆ. ಎರಡು ಆನೆಗಳು ಕಾಳಗಕ್ಕೆ ಬೀಳುತ್ತಿದ್ದಂತೆ ಮಾವುತರು ಅರ್ಜುನನ ಮೇಲಿನಿಂದ ಇಳಿದು ಓಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೊಟ್ಟೆ ಭಾಗದಲ್ಲಿ ತಿವಿತಕ್ಕೆ ಒಳಗಾಗಿ ಕ್ಯಾಪ್ಟನ್ ಅರ್ಜುನ ಕೊನೆಯುಸಿರೆಳೆದಿದೆ. ಮೈಸೂರು ದಸರಾದಲ್ಲಿ ಅರ್ಜುನ ಬರೋಬ್ಬರಿ 8 ಬಾರಿ ಅಂಬಾರಿ ಹೊತ್ತು ಜನಮನಗೆದ್ದಿತ್ತು. 2012ರಿಂದ 2019ರವರೆಗೆ ಅಂಬಾರಿ ಹೊತ್ತು ಅರ್ಜುನ ಸೈ ಎನಿಸಿಕೊಂಡಿತ್ತು. ಜಂಬೂಸವಾರಿಯಲ್ಲಿ ನಿಶಾನೆ ಆನೆಯಾಗಿ ಅರ್ಜುನ ಭಾಗಿಯಾಗಿದ್ದ. ಅರ್ಜುನ ಆನೆಗೆ 65 ವರ್ಷ ವಯಸ್ಸಾಗಿತ್ತು. 288ಮೀ ಎತ್ತರ, 5800 ರಿಂದ 6000 ಕೆ.ಜಿ. ತೂಕ ಇರುವುದು ಇತ್ತೀಚೆಗೆ ದಸರಾದಲ್ಲಿ ಭಾಗವಹಿಸಿದ್ದ ಸಂದರ್ಭ ಗೊತ್ತಾಗಿತ್ತು.

ಎಲ್ಲಾ ರೀತಿಯಲ್ಲೂ ಜನರ ಪ್ರೀತಿಗೆ ಪಾತ್ರನಾಗಿದ್ದ ಕ್ಯಾಪ್ಟನ್ ಅರ್ಜುನನ ಹಠಾತ್ ಸಾವು ಕಂಡು ಮಾವುತರು ಕಣ್ಣೀರು ಹಾಕಿದ್ದಾರೆ.