ಎರಡು ಸಾವಿರ ರೂಪಾಯಿ ನೀಡುವ ಬದಲು ಮೊದಲು ಬಾಣಂತಿಯರ ಸಾವು ನಿಲ್ಲಿಸಿ: ಆರ್ ಅಶೋಕ್ ವಾಗ್ದಾಳಿ.

40

ಬೆಂಗಳೂರು: ಕರ್ನಾಟಕದಲ್ಲಿ ಸಂಭವಿಸುತ್ತಿರುವ ಬಾಣಂತಿಯರ ಸರಣಿ ಸಾವಿನ ವಿಚಾರದ ಕುರಿತು ರಾಜ್ಯ ಸರ್ಕಾರವನ್ನು ಪ್ರತಿಪಕ್ಷ ನಾಯಕ ಆರ್ ಅಶೋಕ್ ತೀವ್ರವಾಗಿ ವಾಗ್ದಂಡನೆಗೆ ತೆಗೆದುಕೊಂಡಿದ್ದಾರೆ. ಇಂದು ಸುದ್ದಿ ವರದಿಗಾರರೊಂದಿಗೆ ಮಾತನಾಡಿದ ಅವರು, ಇದು ಸರ್ಕಾರಿ ಪ್ರಾಯೋಜಿತ ಕೊಲೆಗೆ ಸಮವಾಗಿದೆ. ಈಗಲೂ ಕೂಡ ಈ ಸರ್ಕಾರಕ್ಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಅನಿಸುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಬಾಣಂತಿಯರ ಸಾವಿಗೆ ಸಂಬಂಧಿಸಿದ ನ್ಯಾಯಾಂಗ ವಿಚಾರಣೆ ಕುರಿತು, ಡೆತ್ ಆಡಿಟ್ ಕುರಿತು ಇನ್ನೂ ಯಾವುದೇ ವರದಿ ಬಂದಿಲ್ಲ. ಕಳಪೆ ದ್ರಾವಣ ಪೂರೈಸಿದ ಕಂಪನಿ ವಿರುದ್ಧ ದೆಹಲಿಗೆ ಹೋಗಿ ದೂರು ಕೊಡುವುದಾಗಿ ಆರೋಗ್ಯ ಸಚಿವರು ತಿಳಿಸಿದ್ದರು. ಆದರೆ ಇನ್ನೂ ಯಾಕೆ ಹೋಗಿ ದೂರು ಕೊಟ್ಟಿಲ್ಲ ಎಂದು ಅಶೋಕ್ ಆಕ್ರೋಶದಿಂದ ಪ್ರಶ್ನಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳು ಬಾಣಂತಿಯರ ಪಾಲಿಗೆ ಸಾವಿನ ಮೃದಂಗ ಬಾರಿಸುವಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿಮ್ಮ 2000 ರೂ. ನೀಡುವ ಬದಲು ಮೊದಲು ಬಾಣಂತಿಯರ ಸಾವನ್ನು ನಿಲ್ಲಿಸಿ. ಔಷಧ ನಿಯಂತ್ರಣದಲ್ಲಿ ಬದಲಾವಣೆ ಆಗುತ್ತಿರುವುದನ್ನು ತಪ್ಪಿಸಿ. ರಾಜ್ಯದಲ್ಲಿ ಬಾಣಂತಿಯರಿಗೆ ಬದುಕುವ ಗ್ಯಾರಂಟಿಯನ್ನು ಸರ್ಕಾರ ಕೊಡಲಿ ಎಂದು ಅವರು ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಲ್ಲದಕ್ಕೂ ಕಾರಣ ಎಂದು ಆರೋಪಿಸಿರುವ ಅಶೋಕ್, ಸಚಿವರ ರಾಜಿನಾಮೆಗೆ ಆಗ್ರಹಿಸಿದ್ದಾರೆ. ಅಲ್ಲದೆ, ಬಾಣಂತಿಯರ ಸಾವು ಪ್ರಕರಣವನ್ನು ನ್ಯಾಯಾಂಗ ವಿಚಾರಣೆಗೆ ಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.