ಎಸ್.ಎಲ್. ಧರ್ಮೇಗೌಡ ಅವರ ನಿಧನಕ್ಕೆ ಗಣ್ಯರ ಸಂತಾಪ…

192
firstsuddi

ಬೆಂಗಳೂರು : ವಿಧಾನಪರಿಷತ್ ಉಪಸಭಾಪತಿ ಎಸ್‍.ಎಲ್. ಧರ್ಮೇಗೌಡ ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಟ್ವೀಟ್ ಮೂಲಕ “ವಿಧಾನಪರಿಷತ್ ಉಪಸಭಾಪತಿ ಶ್ರೀ ಎಸ್.ಎಲ್.ಧರ್ಮೇಗೌಡರ ನಿಧನದ ಸುದ್ದಿ ದಿಗ್ಭ್ರಮೆ ಮೂಡಿಸಿದೆ. ಇದನ್ನು ನಂಬಲಿಕ್ಕೇ ಸಾಧ್ಯವಾಗುತ್ತಿಲ್ಲ. ಶಾಸಕರಾಗಿ, ಉಪಸಭಾಪತಿಗಳಾಗಿ ಜನಮನ್ನಣೆ ಗಳಿಸಿದ್ದ ಅವರ ದುರಂತ ಅಂತ್ಯ ಅತ್ಯಂತ ದುಃಖವನ್ನುಂಟು ಮಾಡಿದೆ. ಹಿರಿಯ ಅಧಿಕಾರಿಗಳಿಂದ ಘಟನೆಯ ವಿವರ ಪಡೆದುಕೊಳ್ಳುತ್ತಿದ್ದೇನೆ. ಅವರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತಾ, ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ” ಎಂದು ಸಂತಾಪ ಸೂಚಿಸಿದ್ದಾರೆ.
ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ ಅವರು ಟ್ವೀಟ್ ಮಾಡಿ “ವಿಧಾನಪರಿಷತ್ ಉಪಸಭಾಪತಿ ಹಾಗೂ ಜೆಡಿಎಸ್ ಮುಖಂಡರಾದ ಎಸ್.ಎಲ್. ಧರ್ಮೇಗೌಡರು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಕೇಳಿ ಆಘಾತವಾಗಿದೆ. ಸಜ್ಜನ, ಸನ್ನಡತೆಯ ಉಪಸಭಾಪತಿಗಳನ್ನು ಕಳೆದುಕೊಂಡದ್ದು ನಮ್ಮ ರಾಜ್ಯದ ನಷ್ಟ. ಅವರ ಕುಟುಂಬ ಹಾಗೂ ಬಂಧುಮಿತ್ರರಿಗೆ ಈ ನೋವು ಭರಿಸುವ ಶಕ್ತಿ ಭಗವಂತ ನೀಡಲಿ.”
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿ “ವಿಧಾನಪರಿಷತ್ ಉಪಸಭಾಪತಿ ಜೆಡಿಎಸ್ ಪಕ್ಷದ ಹಿರಿಯ ಮುಖಂಡರು ಹಾಗೂ ನನ್ನ ಸಹೋದರರಂತಿದ್ದ ಎಸ್.ಎಲ್.ಧರ್ಮೇಗೌಡರ ಆತ್ಮಹತ್ಯೆ ಸುದ್ದಿ ತೀವ್ರ ಆಘಾತವನ್ನುಂಟುಮಾಡಿದೆ. ನಿಷ್ಕಲ್ಮಶ ವ್ಯಕ್ತಿತ್ವದ ಸಜ್ಜನ ರಾಜಕಾರಣಿಯೊಬ್ಬರನ್ನು ನಾವು ಕಳೆದುಕೊಂಡಿದ್ದೇವೆ. ಧರ್ಮೇಗೌಡರ ಕುಟುಂಬ ಮತ್ತು ಅಭಿಮಾನಿಗಳಿಗೆ ಈ ನೋವು ಭರಿಸುವ ಶಕ್ತಿ ಭಗವಂತ ಕರುಣಿಸಲಿ.”
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ “ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಶೋಕತಪ್ತ ಕುಟುಂಬಕ್ಕೆ ನನ್ನ ಸಂತಾಪಗಳು” ಎಂದು ಸಂತಾಪ ಸೂಚಿಸಿದ್ದರೆ.