ಒಂದೇ ಮನೆಯ ನಾಲ್ವರ ಬರ್ಬರ ಹತ್ಯೆ…

56
firstsuddi

ತಿರುಪ್ಪೂರ್: ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ಪಲ್ಲಡಂ ಸಮೀಪದ ಕಲ್ಲಕಿನಾರು ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಭೀಕರ ಘಟನೆ ನಡೆದಿದೆ.

ಮೃತರನ್ನು ಸೆಂಥಿಲ್ ಕುಮಾರ್, ಅವರ ತಾಯಿ ಪುಷ್ಪಾವತಿ, ಸೋದರಸಂಬಂಧಿ ಮೋಹನ್ ಮತ್ತು ಇನ್ನೊಬ್ಬ ಸಂಬಂಧಿ ರತ್ನಾಂಬಳ್ ಎಂದು ಗುರುತಿಸಲಾಗಿದೆ. ಅದೇ ಊರಿನ ಮೂವರು ವ್ಯಕ್ತಿಗಳು ಹಳೆಯ ದ್ವೇಷದ ಕಾರಣದಿಂದ ನಾಲ್ವರನ್ನು ಕೊಚ್ಚಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಅಪರಾಧಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಎಲ್ಲಾ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುವವರೆಗೂ ಮೃತರ ಸಂಬಂಧಿಕರು ಮತ್ತು ಸ್ನೇಹಿತರು ಆ ಮೃತದೇಹಗಳನ್ನು ಸ್ವೀಕರಿಸುವುದಿಲ್ಲ ಎಂದು ಹಠ ಹಿಡಿದಿದ್ದಾರೆ. ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಅವರು ಪಲ್ಲಡಂನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸಮಾಧಾನಪಡಿಸಿದ್ದಾರೆ.

ಪೊಲೀಸರ ಪ್ರಕಾರ, ಪಲ್ಲಡಂನ ಕಲ್ಲಕಿನಾರುನಲ್ಲಿರುವ ಸೆಂಥಿಲ್ ಕುಮಾರ್ ಅವರ ಅಂಗಡಿಯ ಸಮೀಪವಿರುವ ಮನೆಯ ಬಳಿ ಅವರೆಲ್ಲರ ಮೃತದೇಹಗಳು ಪತ್ತೆಯಾಗಿವೆ. ಆ ಶವಗಳ ಮೇಲೆ ಮಚ್ಚಿನಿಂದ ಕೊಚ್ಚಿದ ಹಲವಾರು ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.

ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪಲ್ಲಡಂ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸೆಂಥಿಲ್ ಕುಮಾರ್ ಅವರ ಚಾಲಕನಾಗಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ಎಂಬಾತ ಸೆ. 3ರಂದು ರಾತ್ರಿ ಸೆಂಥಿಲ್ ಕುಮಾರ್ ಅವರ ಅಂಗಡಿಯ ಬಳಿ ಬಂದು ಜಗಳವಾಡಿದ್ದ. ಆಗ ಆತನಿಗೆ ಇನ್ನಿಬ್ಬರು ಸ್ನೇಹಿತರು ಸಾಥ್ ನೀಡಿದ್ದರು. ಈ ವೇಳೆ ಸೆಂಥಿಲ್ ಸಹಾಯಕ್ಕಾಗಿ ಜೋರಾಗಿ ಕೂಗಿದ್ದಾರೆ. ಆಗ ಅವರ ಕೂಗನ್ನು ಕೇಳಿ, ಅವರ ಸೋದರಸಂಬಂಧಿ, ತಾಯಿ ಮತ್ತು ಇನ್ನೊಬ್ಬ ಸಂಬಂಧಿ ಅವರನ್ನು ರಕ್ಷಿಸಲು ಧಾವಿಸಿದರು. ಆಗ ಆರೋಪಿಗಳು ಅವರೆಲ್ಲರನ್ನೂ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.