ಸೌತ್ ಸಿನಿಮಾ ಇಂಡಸ್ಟ್ರೀಯ ಮುಂದಿನ ಬಹುನಿರೀಕ್ಷಿತ ಚಿತ್ರ ‘ಕಣ್ಣಪ್ಪ’ ಚಿತ್ರೀಕರಣದ ವೇಳೆ ನಟ ವಿಷ್ಣು ಮಂಚುಗೆ ಗಂಭೀರ ಗಾಯವಾಗಿದೆ ಎಂಬ ಸುದ್ದಿ ಸಖತ್ ಸದ್ದು ಮಾಡುತ್ತಿದೆ.
ನ್ಯೂಜಿಲೆಂಡ್‍ನಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಡ್ರೋನ್ ಕ್ಯಾಮರಾ ನಿಯಂತ್ರಣ ತಪ್ಪಿ ವಿಷ್ಣು ಮಂಚು ಅವರ ಮೇಲೆ ಅಪ್ಪಳಿಸಿದೆ. ಪರಿಣಾಮ ನಟ ವಿಷ್ಣು ಮಂಚುಗೆ ಗಂಭೀರ ಗಾಯವಾಗಿದೆ. ಕೂಡಲೇ ಅವರನ್ನು ನ್ಯೂಜಿಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಹಸ ಸನ್ನಿವೇಶದಲ್ಲಿ ಈ ಅವಘಡ ಸಂಭವಿಸಿದ್ದು, ತೀವ್ರ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದು, ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಕಣ್ಣಪ್ಪ ಚಿತ್ರವು ವಿಷ್ಣು ಮಂಚು ಅವರ ಮಹತ್ವಾಕಾಂಕ್ಷೆಯ ಚಿತ್ರವಾಗಿದ್ದು, ಇಂಥದ್ದೊಂದು ಪೌರಾಣಿಕ ಚಿತ್ರದ ಭಾಗವಾಗಬೇಕು ಎಂಬುದು ಅವರ ಏಳು ವರ್ಷಗಳ ಕನಸಾಗಿತ್ತು. ಅದು ಶಿವ-ಪಾರ್ವತಿಯರ ಆಶೀರ್ವಾದದಿಂದ ಕೊನೆಗೂ ನನಸಾಗಿದೆ ಎಂದು ವಿಷ್ಣು ಹೇಳಿಕೊಂಡಿದ್ದರು.
ಇಂಥದ್ದೊಂದು ಬೃಹತ್ ಭಕ್ತಿಪ್ರಧಾನ ಚಿತ್ರದ ಕನಸನ್ನು ವಿಷ್ಣು ಅವರಲ್ಲಿ ಮೊದಲಿಗೆ ಬಿತ್ತಿದ್ದು ಖ್ಯಾತ ನಟ ಮತ್ತು ನಿರ್ದೇಶಕ ತನಿಕೆಲ್ಲ ಭರಣಿ. ಏಳು ವರ್ಷಗಳ ಹಿಂದೆ, ಭರಣಿ ಅವರು ವಿಷ್ಣುಗೆ ‘ಕಣ್ಣಪ್ಪ’ ಚಿತ್ರದ ಕಥೆ ಹೇಳಿದರಂತೆ. ಅಲ್ಲಿಂದ ಶುರುವಾದ ಪ್ರಯಾಣ, ಈಗ ಸಿನಿಮಾ ಪ್ರಾರಂಭವಾಗುವವರೆಗೂ ಬಂದು ನಿಂತಿದೆ.










