ಬೆಂಗಳೂರು : ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಒಂದೇ ದಿನ ಬರೋಬ್ಬರಿ 105 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,710ಕ್ಕೆ ಏರಿಕೆಯಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬಿಡುಗಡೆಯಾದ ಇಂದು ಮಧ್ಯಾಹ್ನದ ಹೆಲ್ತ್ ಬುಲೆಟಿನ್‍ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲೇ 45 ಮಂದಿಯಲ್ಲಿ ಸೋಂಕು ತಗುಲಿರುವುದು ದೃಢವಾಗಿದ್ದು, ಹಾಸನ-18, ತುಮಕೂರು-8, ಬೀದರ್-6, ಬೆಂಗಳೂರು-5, ಚಿಕ್ಕಮಗಳೂರು-5, ಬೆಂಗಳೂರು ಗ್ರಾಮಾಂತರ-4, ಹಾವೇರಿ-3, ಮಂಡ್ಯ-3, ವಿಜಯಪುರ-2, ಧಾರವಾಡ-2, ಬಾಗಲಕೋಟೆ-1, ಚಿತ್ರದುರ್ಗ-1, ದಕ್ಷಿಣ ಕನ್ನಡ-1, ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ರಾಜ್ಯದಲ್ಲಿ 1,710 ಮಂದಿ ಸೋಂಕಿತರ ಪೈಕಿ 588 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 41 ಮಂದಿ ಮೃತಪಟ್ಟಿದ್ದಾರೆ.










