ಕನ್ನಡ ಭಾಷೆ ಕಲಿಕೆ ಕಡ್ಡಾಯಕ್ಕೆ ಬಲವಂತ ಬೇಡ – ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ…

71
firstsuddi

ಬೆಂಗಳೂರು : ರಾಜ್ಯದ ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ ಆದೇಶದವರೆಗೂ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಕ್ರಮ ಪ್ರಶ್ನಿಸಿ ಸಂಸ್ಕೃತ ಭಾರತಿ ಕರ್ನಾಟಕ ಟ್ರಸ್ಟ್ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದು, ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ.ನರಗುಂದ್, ಭಾಷೆಯ ವಿಚಾರ ಗಂಭೀರ ಪರಿಣಾಮ ಬೀರುವ ವಿಷಯ. ಕೇಂದ್ರ ಸರ್ಕಾರ ರಾಜ್ಯಗಳೊಂದಿಗೆ ಸಮಾಲೋಚಿಸಬೇಕಿದೆ. ಸಮಾಲೋಚನೆ ನಂತರ ಕೇಂದ್ರದ ನಿಲುವು ತಿಳಿಸಲಾಗುವುದು ಎಂದು ಹೇಳಿದರು. ಇದೇ ವೇಳೆ, ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಈಗಾಗಲೇ 4 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಅರ್ಜಿದಾರ ವಿದ್ಯಾರ್ಥಿಗಳು ಕನ್ನಡ ವ್ಯಾಸಂಗ ಮಾಡಿದ್ದಾರೆ. ಮಧ್ಯಂತರ ಆದೇಶ ನೀಡದಂತೆ ಮನವಿ ಮಾಡಿದರು.

ವಾದ ಆಲಿಸಿದ ಪೀಠ, ರಾಜ್ಯದ ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸಬಾರದು. ಕನ್ನಡ ಕಲಿತ ವಿದ್ಯಾರ್ಥಿಗಳು ಕಲಿಯಲು ಅಡ್ಡಿಯಿಲ್ಲ. ಆದರೆ, ಕನ್ನಡ ಕಲಿಯಲು ಬಯಸದೇ ಇರುವ ವಿದ್ಯಾರ್ಥಿಗಳಿಗೆ ಕಡ್ಡಾಯ ಬೇಡ.ಮುಂದಿನ ಆದೇಶದವರೆಗೂ ಕಡ್ಡಾಯಗೊಳಿಸುವುದಾಗಲಿ, ಬಲವಂತ ಮಾಡುವುದಾಗಲಿ ಬೇಡ ಎಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ, ವಿಚಾರಣೆ ಮುಂದೂಡಿತು.