ಬೆಂಗಳೂರು : ಕನ್ನಡದ ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರು ನಿನ್ನೆ ರಾತ್ರಿ ಹೃದಯಸ್ತಂಬನದಿಂದ ಕೊನೆಯುಸಿರೆಳೆದಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಸುಬ್ಬಣ್ಣ ಅವರಿಗೆ ನಿನ್ನೆ ಸಂಜೆ ಲಘು ಹೃದಯಾಘಾತವಾಗಿತ್ತು. ತಕ್ಷಣ ಅವರನ್ನು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ 10.30ರ ಸುಮಾರಿಗೆ ಹೃದಯ ಸ್ತಂಭನದಿಂದ ಅವರು ಮೃತಪಟ್ಟಿದ್ದಾರೆ. ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ಅಂತ್ಯಕ್ರಿಯೆ ನಡೆಯಲಿದೆ.
ಕನ್ನಡ ಸುಗಮ ಸಂಗೀತ ಕ್ಷೇತ್ರದ ಹಿರಿಯ ಗಾಯಕರಾಗಿದ್ದ ಶಿವಮೊಗ್ಗ ಸುಬ್ಬಣ್ಣ ಅವರ ಕಾಡು ಕುದುರೆ ಓಡಿ ಬಂದಿತ್ತಾ ಹಾಡು ಪ್ರಖ್ಯಾತಿ ಪಡೆದಿತ್ತು. 1979ರಲ್ಲಿ ‘ಕಾಡು ಕುದುರೆ’ ಚಲನಚಿತ್ರಕ್ಕೆ ಕಾಡು ಕುದುರೆ ಓಡಿ ಬಂದಿತ್ತಾ ಹಾಡನ್ನು ಸುಬ್ಬಣ್ಣ ಹಾಡಿದ್ದರು. ಅವರ ಹಿನ್ನೆಲೆ ಗಾಯನಕ್ಕೆ ಅವರಿಗೆ ರಾಷ್ಟ್ರ ಪ್ರಶಸ್ತಿ ದೊರಕಿತ್ತು. ಅಷ್ಟೇ ಅಲ್ಲದೆ, ಹಲವಾರು ಪ್ರಶಸ್ತಿ ಮತ್ತು ಗೌರವಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸುಬ್ಬಣ್ಣನವರು 14ನೇ ಡಿಸೆಂಬರ್ 1938ರಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ಗ್ರಾಮದಲ್ಲಿ ಜನಿಸಿದರು. ತಂದೆ ಗಣೇಶರಾವ್, ತಾಯಿ ರಂಗನಾಯಕಮ್ಮ. ಸಂಗೀತಗಾರರ ವಂಶದಲ್ಲಿ ಜನಿಸಿದ ಸುಬ್ಬಣ್ಣನವರು ಅಜ್ಜ ಶಾಮಣ್ಣನವರಿಂದಲೇ ಸಂಗೀತದ ಪ್ರಥಮ ಪಾಠ ಹೇಳಿಸಿಕೊಂಡರು. ನಂತರ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಎಂ. ಪ್ರಭಾಕರ್ ಅವರಿಂದ ಅಭ್ಯಾಸ ಮಾಡಿದರು. ಪ್ರಮುಖ ಕವಿಗಳ ಕೃತಿಗಳನ್ನು ಸ್ವತಃ ರಾಗ ಸಂಯೋಜಿಸಿ ಹಾಡುವುದರ ಮೂಲಕ ಮನೆ ಮಾತಾದರು. ವಕೀಲರಾಗಿ ವೃತ್ತಿ ಬದುಕು ಆರಂಭಿಸಿದ ಇವರು ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಗಾಯಕರಾಗಿದ್ದರು. ಮೃತರು ಮಕ್ಕಳಾದ ಶ್ರೀರಂಗ ಮತ್ತು ಬಾಗೇಶ್ರೀ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.










