ಹಾಸನ : ಜಿಲ್ಲೆಯಲ್ಲಿ 38 ಮಂಗಗಳ ಮಾರಣಹೋಮ ಮಾಸುವ ಮುನ್ನವೇ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. 100ಕ್ಕೂ ಹೆಚ್ಚು ಕರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಅಪಘಾತವಾಗಿ 50ಕ್ಕೂ ಹೆಚ್ಚು ಕರುಗಳು ಬಲಿಯಾಗಿರುವ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ದ್ಯಾವಪ್ಪನಹಳ್ಳಿ ಗ್ರಾಮದ ಬಳಿ ನಡೆದಿದೆ.
ಪುಟ್ಟ ಗೂಡ್ಸ್ ವಾಹನದಲ್ಲಿ ಸುಮಾರು 100ಕ್ಕೂ ಅಧಿಕ ಕರುಗಳನ್ನು ಕಳ್ಳ ಮಾರ್ಗದಲ್ಲಿ ಸಾಗಿಸಲಾಗುತ್ತಿತ್ತು. ಗೋಹತ್ಯೆ ನಿಷೇಧ ಇರುವುದರಿಂದ ದುಷ್ಟರು ರಾತ್ರೋ ರಾತ್ರಿ ಗೋವುಗಳನ್ನು ಸಾಗಿಸುತ್ತಿದ್ದರು. ಬಾಯಿ, ಕಾಲಿಗೆ ಹಗ್ಗ ಕಟ್ಟಿ ಅಮಾನವೀಯವಾಗಿ ಮೂಕ ಪ್ರಾಣಿಗಳ ಸಾಗಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಗೂಡ್ಸ್ ಆಟೋದಲ್ಲಿ ಉಸಿರುಗಟ್ಟಿ ಹಲವು ಕರುಗಳು ಸಾವನ್ನಪ್ಪಿದ್ದು, ಅಪಘಾತದ ಬಳಿಕ ಮತ್ತಷ್ಟು ಕರುಗಳು ಬಲಿಯಾಗಿವೆ. ಒಟ್ಟು 50ಕ್ಕೂ ಹೆಚ್ಚು ಕರುಗಳು ಸಾವನ್ನಪ್ಪಿದ್ದು, ಉಳಿದ 50 ಕರುಗಳನ್ನು ರಕ್ಷಣೆ ಮಾಡಲಾಗಿದೆ.
ಸ್ಥಳಕ್ಕೆ ಪೊಲೀಸರು ಹಾಗೂ ತಾಲೂಕು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಿಂದ ಸ್ವತಃ ವಿಡಿಯೋ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೇಲೂರು ಶಾಸಕ ಲಿಂಗೇಶ್ ಆಗ್ರಹಿಸಿದ್ದಾರೆ.










