ಕರ್ನಾಟಕ, ಉತ್ತರ ಪ್ರದೇಶದ ನಡುವೆ ಬಲಿಷ್ಠ ಸಂಬಂಧ ಇದೆ : ಯೋಗಿ ಆದಿತ್ಯನಾಥ್.

41
firstsuddi

ಬೆಂಗಳೂರು : ಕರ್ನಾಟಕ ಮತ್ತು ಉತ್ತರ ಪ್ರದೇಶದ ನಡುವೆ ಮೊದಲಿನಿಂದಲೂ ಬಲಿಷ್ಠ ಸಂಬಂಧವಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದರು.

ನೆಲಮಂಗಲದಲ್ಲಿ ಕ್ಷೇಮವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಬೆಂಗಳೂರು ಐಟಿ-ಬಿಟಿ ಹಬ್ ಎಂದು ಪ್ರಸಿದ್ಧಿಯನ್ನು ಪಡೆದಿದೆ. ಇನ್ನು ಮುಂದೆ ಬೆಂಗಳೂರಿಗೆ ಸಾಂಪ್ರದಾಯಿಕ ವೈದ್ಯ ಪದ್ಧತಿಯ ಹಬ್ ಆಗುವ ಅವಕಾಶ ಸಿಕ್ಕಿದೆ. ಶಿಕ್ಷಣ ಹಾಗೂ ಆಧ್ಯಾತ್ಮಿಕ ಎರಡು ಕ್ಷೇತ್ರಗಳಲ್ಲೂ ಕರ್ನಾಟಕದಲ್ಲಿ ಕೆಲಸ ನಡೆಯುತ್ತಿದೆ. ನಮ್ಮ ಪರಂಪರೆಯ ಚಿಕಿತ್ಸಾ ಕೇಂದ್ರಗಳು ಇಲ್ಲಿ ಮುಂದುವರೆದಿದೆ ಎಂದರು.

ಬೆಂಗಳೂರಿನಲ್ಲಿ ಕ್ಷೇಮವನ ಸ್ಥಾಪನೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮಹಾ ಪ್ರಸಾದ. ಕೋವಿಡ್ ಸಂದರ್ಭದಲ್ಲಿ ಯೋಗದ ತಾಕತ್ತು ಗೊತ್ತಾಗಿದೆ. ಧರ್ಮಾಧಿಕಾರಿಯ ರೂಪದಲ್ಲಿ ವೀರೇಂದ್ರ ಹೆಗ್ಗಡೆ ಪಾರಂಪರಿಕ ವೈದ್ಯ ಪದ್ದತಿಯನ್ನು ಪರಿಚಯಿಸಿದ್ದಾರೆ. ಬಜರಂಗಬಲಿಯ ಸಹಾಯದಿಂದ ರಾಮಸೇತುವೆ ನಿರ್ಮಾಣವಾಯಿತು. ನಾನು ಒಬ್ಬ ಯೋಗಿ, ಸ್ವಾಮಿ ನಿರ್ಮಲಾನಂದನಾಥ ಕೂಡಾ ಯೋಗಿ. ಬಸವರಾಜ ಬೊಮ್ಮಾಯಿ ರಾಜ್ಯದ ಜನರ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದಾರೆ. ವೀರೇಂದ್ರ ಹೆಗ್ಗಡೆ ಕೂಡಾ ಯೋಗಿಯ ರೂಪದಲ್ಲಿ ಧರ್ಮಸ್ಥಳದ ಮೂಲಕ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಉತ್ತರ ಪ್ರದೇಶದಲ್ಲಿ ಆಯುಷ್ ವಿವಿ ಸ್ಥಾಪನೆ ವೇಳೆ ನಾನು ಡಾ. ನಾಗೇಂದ್ರ ಅವರ ಮಾರ್ಗದರ್ಶನ ಪಡೆದಿದ್ದೆ. ಕರ್ನಾಟಕದಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಕರ್ನಾಟಕ ಸರ್ಕಾರ ವಿಕಾಸದತ್ತ ಕೆಲಸ ಮಾಡುತ್ತಿದೆ. ಬೊಮ್ಮಾಯಿ ಸಮೃದ್ಧ ಮತ್ತು ಸುರಕ್ಷಿತ ಕರ್ನಾಟಕಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ದೇಶದ ಬಲಿಷ್ಠ ಅರ್ಥ ವ್ಯವಸ್ಥೆಯ ರಾಜ್ಯವಾಗಲಿ. ಬೊಮ್ಮಾಯಿ ಸರ್ಕಾರಕ್ಕೆ ವಂದನೆ ಸಲ್ಲಿಸುತ್ತೇನೆ ಎಂದು ಕಾರ್ಯಕ್ರಮದಲ್ಲಿ ಯೋಗಿ ಆದಿತ್ಯನಾಥ್ ಬಸವರಾಜ ಬೊಮ್ಮಾಯಿ ಸರ್ಕಾರವನ್ನು ಹೊಗಳಿದರು.