ಕರ್ನಾಟಕ ಬಂದ್ ಬೆನ್ನಲ್ಲೇ ಅ.5ರಂದು ಕೆಆರ್‌ಎಸ್ ಅಣೆಕಟ್ಟು ಮುತ್ತಿಗೆಗೆ ಕರೆಕೊಟ್ಟ ವಾಟಾಳ್ ನಾಗರಾಜ್.

62
firstsuddi

ಬೆಂಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸದಂತೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ವಾಟಾಳ್ ನಾಗರಾಜ್ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದರು. ಕಾವೇರಿ ನೀರಿಗಾಗಿ ಈಗಾಗಲೇ ಬೆಂಗಳೂರು ಬಂದ್ ಯಶಸ್ವಿಯಾಗಿದ್ದು, ಇಂದು ಕರ್ನಾಟಕ ಬಂದ್ ನಡೆಯುತ್ತಿದೆ. ಇದರ ಬೆನ್ನಲ್ಲಿಯೇ ಅಕ್ಟೋಬರ್ 5ರಂದು ಕೆಆರ್‌ಎಸ್ ಆಣೆಕಟ್ಟು ಮುತ್ತಿಗೆ ಹಾಕುವುದಕ್ಕೆ ಮಾಜಿ ಶಾಸಕ ವಾಟಾಳ್ ನಾಗರಾಜ್ ಕರೆ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ವಿಭಿನ್ನವಾಗಿ ಬುರ್ಖಾ ಧರಿಸಿ ತಲೆಯ ಮೇಲೆ ಬಿಂದಿಗೆ ಹೊತ್ತುಕೊಂಡು ಸರ್ಕಾರದ ವಿರುದ್ಧ ಕಾವೇರಿ ನೀರು ಹರಿಸದಂತೆ ಪ್ರತಿಭಟನೆ ಮಾಡಿದ ವಾಟಾಳ್ ನಾಗರಾಜ್, ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸುವವರೆಗೂ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಾಟಾಳ್ ನಾಗರಾಜ್, ಅಕ್ಟೋಬರ್ 5ರಂದು ಕನ್ನಡಪರ ಸಂಘಟನೆಗಳು ಕೆಆರ್‌ಎಸ್ ಅಣೆಕಟ್ಟೆಗೆ ಮುತ್ತಿಗೆ ಹಾಕುವುದಾಗಿ ಘೋಷಿಸಿದರು. ಕಾರ್ಯಕ್ರಮದಲ್ಲಿ ಸಹಸ್ರಾರು ರೈತರು ಭಾಗವಹಿಸಲಿದ್ದಾರೆ. ಪ್ರತಿಭಟಿಸುವ ಹಕ್ಕನ್ನು ಸಿಎಂ ಸಿದ್ದರಾಮಯ್ಯನವರ ಸರ್ಕಾರ ಕಿತ್ತುಕೊಳ್ಳುತ್ತಿದೆ. ದೆಹಲಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಕನ್ನಡಿಗರ ಸಾಮರ್ಥ್ಯ ತೋರಿಸಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಆದರೆ, ಸಿಎಂ ಸಿದ್ದರಾಮಯ್ಯಗೆ ಇದು ಅರ್ಥವಾಗುತ್ತಿಲ್ಲ ಎಂದು ಟೀಕಿಸಿದರು.